

ವಿಜಯಪುರ: ಇತ್ತೀಚೆಗೆ ನಾನೇ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಅವರ ಹೇಳಿಕೆಯನ್ನು ಬದಲಿಸಿದ್ದು, ಮುಖ್ಯಮಂತ್ರಿ ಯಾರಾದರೂ ತಮ್ಮ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾಳಿಕೋಟೆ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ಬೂದಹಾಳ ತೀರಾಪೂರ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೊಮ್ಮಾಯಿಯವರೇ ಸಿಎಂ ಆಗಲು ನಮ್ಮ ತಕರಾರು ಇಲ್ಲ. ಈ ರೀತಿ ಮಾಡುವ ಜನರು ನಾವಲ್ಲ. ಮುಂದಿನ ಮುಖ್ಯಮಂತ್ರಿಯೂ ನೀವೇ ಆಗಿ ಎಂದು ಹೇಳಿದರು.
ನಾವು ಏನೂ ಆಗುವುದಿಲ್ಲ ಎಂದಾದ ಮೇಲೆ ತಕರಾರು ಮಾಡಿ ಏನು ಪ್ರಯೋಜನ ಎಂದರು. ಯತ್ನಾಳ ಅವರ ಮಾತಿಗೆ ಸಿಎಂ ನಸುನಕ್ಕು ಸುಮ್ಮನಾದರು. ಇನ್ನು ವೇದಿಕೆಯಲ್ಲಿ ಭಾಷಣದ ವೇಳೆ ಯತ್ನಾಳ್ ಅವರ ಕಡೆ ನೋಡಿ ಸಿಎಂ ಕೈ ಮುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಯತ್ನಾಳ್ ನಾವೇನು ತಕರಾರು ಮಾಡಲ್ಲ. ಮುಂದೆಯೂ ಸಿಎಂ ಆಗಿಬಿಡಿ ಎಂದು ಹೇಳಿದರು.