ಬಿಕ್ಕೋಡು ಹೋಬಳಿ ಸುತ್ತಮುತ್ತ ಕಾಡಾನೆಗಳ ಹಾವಳಿ

18blrp4
ಕಾಫಿ ಬೆಳೆಗಾರರ ಸಂಘದ ಖಜಾಂಚಿ ಶಿವೇಗೌಡ ಅವರ ತೋಟ ಹಾಗೂ ಬೆಳ್ಳಾವರ ಗ್ರಾಮದ ವಿಶ್ವನಾಥ್ ನಾಯಕ್ ಅವರ ತೋಟಕ್ಕೆ ಕಾಡಾನೆಗಳ ಹಿಂಡು ನುಗ್ಗಿ ಕಾಫಿ, ಅಡಕೆ ಬೆಳೆ ನಾಶಪಡಿಸಿರುವುದು.
Published on

ಬೇಲೂರು: ತಾಲೂಕಿನ ಅರೇಹಳ್ಳಿ ಹಾಗೂ ಬಿಕ್ಕೋಡು ಹೋಬಳಿಗಳ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ರೈತರು ಬೆಳೆದ ಬೆಳೆ ನಾಶವಾಗುತ್ತಿದ್ದು, ಮತ್ತಷ್ಟು ಬೆಳೆ ನಾಶವಾಗುವ ಮುನ್ನವೇ ಕಾಡಾನೆಗಳನ್ನು ಶಾಶ್ವತವಾಗಿ ಓಡಿಸುವಂತೆ ಬೆಳೆಗಾರರು, ಕೂಲಿ ಕಾರ್ಮಿಕರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ತಾಲೂಕಿನ ಮಲೆನಾಡು ಭಾಗದ ಸಾಕಷ್ಟು ಗ್ರಾಮಗಳಲ್ಲಿ ಕಾಡಾನೆಗಳು ಪ್ರತ್ಯೇಕ ಹಿಂಡುಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ತಾಲೂಕಿನ ಅರೇಹಳ್ಳಿ ಹೋಬಳಿಯ ಸೂರ್ಕೋಡು, ಹುಲ್ಕೋಡು, ಟಾಟಾ ಎಸ್ಟೇಟ್, ಮಲಸಾವರ, ಮಲ್ಲಾಪುರ, ಕಾನಹಳ್ಳಿ, ನೇರಲಮಕ್ಕಿ, ಬೆಳ್ಳಾವರ ಹಾಗೂ ಬಿಕ್ಕೋಡು ಹೋಬಳಿಯ ಜಗಬೋರನಹಳ್ಳಿ, ಬೊಮ್ಮಡಿಹಳ್ಳಿ-ಚೌಡನಹಳ್ಳಿ ಭಾಗದಲ್ಲಿ ಕಾಡಾನೆಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ಆನೆಗಳ ಪೈಕಿ ಪ್ರತ್ಯೇಕವಾಗಿ ಎರಡು ಮೂರು ಹಾಗೂ 10ಕ್ಕೂ ಹೆಚ್ಚಿನ ಆನೆಗಳ ಹಿಂಡು ಹಗಲು-ರಾತ್ರಿ ಎನ್ನದೆ ಎಲ್ಲೆಂದರಲ್ಲಿ ತೋಟ, ಗ್ರಾಮ ಎನ್ನದೆ ಮನಸ್ಸಿಗೆ ಬಂದಂತೆ ನುಗ್ಗುತ್ತಿವೆ. ಜತೆಗೆ ಕೆಲ ತೋಟಗಳಿಗೆ ಅಳವಡಿಸಿರುವ ಸೋಲಾರ್ ವಿದ್ಯುತ್ ತಂತಿಗಳನ್ನೂ ಬಿಡದೆ ಜಾಣತನದಿಂದ ತುಳಿದು ತೋಟದೊಳಕ್ಕೆ ನುಗ್ಗಿದರೆ, ಮತ್ತೆ ಕೆಲವು ತೋಟಕ್ಕೆ ಅಳವಡಿಸಿರುವ ಕಬ್ಬಿಣದ ತಂತಿ ಬೇಲಿ ಕಿತ್ತುಹಾಕಿ ಒಳನುಗ್ಗುತ್ತಿವೆ. ಇದರಿಂದಾಗಿ ಅಪಾರ ಪ್ರಮಾಣದ ಅಡಕೆ, ಕಾಫಿ, ಬಾಳೆ ಸೇರಿದಂತೆ ಇತರ ಬೆಳೆಗಳು ನಾಶವಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net