ಹೆಂಡತಿ ಕಿರುಕುಳ ಸಹಿಸಲಾರೆ... ಸಾವೊಂದೆ ನನಗಿರುವ ದಾರಿ ಎಂದು ರೈಲಿಗೆ ಹಾರಿ ಪ್ರಾಣ ಬಿಟ್ಟ ಪತಿ! Wife Torture

Wife Torture
Published on

Wife Torture : ನನಗೆ ಮದುವೆಯಾಗಿ ಎರಡು ವರ್ಷಗಳಾಗಿವೆ. ಮದುವೆಯಾದ ದಿನದಿಂದಲೂ ನನ್ನ ಹೆಂಡತಿ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ. ಅವಳ ಕಿರುಕುಳ ಸಹಿಸಲಾರೆ. ನನಗಿರುವುದು ಸಾವೊಂದೆ ದಾರಿ ಎಂದು ಹೇಳಿ ವ್ಯಕ್ತಿಯೊಬ್ಬರು ಚಲಿಸುವ ರೈಲಿನ ಮುಂದೆ ಹಾರಿ ಸಾವಿಗೆ ಶರಣಾದ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಪೂರ್ವ ಕರಾವಳಿ ವಿಭಾಗದ ರೈಲ್ವೆ ಪೊಲೀಸರ ಮಾಹಿತಿ ಪ್ರಕಾರ, ಒಡಿಶಾದ ಖೋರ್ಧಾ ಜಿಲ್ಲೆಯ ಕುಂಭಾರ್ಬಸ್ತಾ ನಿವಾಸಿ ರಾಮಚಂದ್ರ ಬರ್ಜೇನಾ ಚಲಿಸುವ ರೈಲಿನ ಮುಂದೆ ಹಾರಿ ಸಾವಿಗೀಡಾಗಿದ್ದಾರೆ. ಈ ಘಟನೆಗೂ ಮೊದಲು ರಾಮಚಂದ್ರ ಅವರು ತಮ್ಮ ಸೆಲ್‌ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು, ಆ ವಿಡಿಯೋ ವೈರಲ್​ ಆಗಿದೆ.

ವಿಡಿಯೋದಲ್ಲಿ, ನಾನು ರಾಮಚಂದ್ರ ಬರ್ಜೇನಾ. ನಾನು ಕುಂಭಾರ್ಬಸ್ತಾದಲ್ಲಿ ವಾಸಿಸುತ್ತಿದ್ದೇನೆ. ಇಂದು ನಾನು ಆತ್ಮಹತ್ಯೆ ಮಾಡಿಕೊಳ್ಳಲಿದ್ದೇನೆ. ಇದಕ್ಕೆ ಕಾರಣ ನನ್ನ ಪತ್ನಿ ರೂಪಾಲಿ. ರೂಪಾಲಿ ನನ್ನನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾಳೆ. ನಾನು ಇನ್ನು ಬದುಕಲು ಸಾಧ್ಯವಿಲ್ಲ ಎಂದು ದುಃಖಿಸುತ್ತಾ ಹೇಳಿದ್ದಾನೆ. ವಿಡಿಯೋ ಚಿತ್ರೀಕರಿಸಿದ ನಂತರ, ನಿಜಿಘರ್-ತಪಾಂಗ್ ರೈಲ್ವೆ ಹಳಿಯ ಬಳಿ ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮಚಂದ್ರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಒಡಿಶಾದ ರಾಮಚಂದ್ರ ಮತ್ತು ರೂಪಾಲಿ ದಂಪತಿ ಎರಡು ವರ್ಷಗಳ ಹಿಂದೆ ವಿವಾಹವಾದರು. ಅವರಿಗೆ ಒಂದು ಹೆಣ್ಣು ಮಗುವಿದೆ. ಆದರೆ, ಮದುವೆಯಾದ ದಿನದಿಂದಲೇ ಪತ್ನಿ ರೂಪಾಲಿ ತನ್ನ ಪತಿ ರಾಮಚಂದ್ರನಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಳು. ಇದು ಸಾಕಾಗಲಿಲ್ಲ ಎಂಬಂತೆ ಆಕೆ ಆತನ ಮೇಲೆ ನಿತ್ಯವೂ ಹಲ್ಲೆ ಮಾಡುತ್ತಿದ್ದಳು. ಇದೆಲ್ಲವನ್ನೂ ಸಹಿಸಲಾಗದೆ ರಾಮಚಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮಚಂದ್ರ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದ್ದು, ಸಂತ್ರಸ್ತ ರಾಮಚಂದ್ರ ರೆಕಾರ್ಡ್​ ಮಾಡಿದ ವಿಡಿಯೋ ಆಧರಿಸಿ ಪತ್ನಿ ರೂಪಾಳನ್ನು ಬಂಧಿಸಲಾಗಿದೆ.

ರಾಮಚಂದ್ರ ಆತ್ಮಹತ್ಯೆ ಮಾಡಿಕೊಂಡ ನಂತರ, ಆತನ ಪಾಲಕರು ಸೊಸೆ ರೂಪಾಲಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಮಗ ರಾಮಚಂದ್ರ ಎರಡು ವರ್ಷಗಳ ಹಿಂದೆ ರೂಪಾಲಿಯನ್ನು ವಿವಾಹವಾದರು. ನಮ್ಮ ಮನೆಯಲ್ಲಿಯೂ ಮದುವೆಯನ್ನು ಬಹಳ ಅದ್ದೂರಿಯಾಗಿ ನಡೆಸಿದ್ದೇವೆ. ಮದುವೆಯಾದ ದಿನದಿಂದ ರೂಪಾಲಿ ನನ್ನ ಮಗನನ್ನು ಹಿಂಸಿಸುತ್ತಿದ್ದಳು. ಒಂದು ಮಗು ಜನಿಸಿತು. ಅವಳು ಆಗಾಗ್ಗೆ ಮನೆಯಿಂದ ತವರು ಮನೆಗೆ ಹೋಗುತ್ತಿದ್ದಳು. ಅವರ ಕುಟುಂಬಕ್ಕೆ 20 ಲಕ್ಷ ರೂ. ಸಾಲ ನೀಡಿದ್ದೇವೆ. ಆದರೆ, ರೂಪಾಲಿಯ ನಡವಳಿಕೆ ಬದಲಾಗಲಿಲ್ಲ. ನನ್ನ ಮಗ ಅವಳ ಕೈಯಲ್ಲಿ ನರಕಯಾತನೆ ಅನುಭವಿಸಿದನು. ಈ ಆತ್ಮಹತ್ಯೆ ಅವಳ ಕ್ರೌರ್ಯದ ಪರಿಣಾಮ. ನಮಗೆ ನ್ಯಾಯ ಕೊಡಿ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net