

ಚಾಮರಾಜನಗರ: ಹಣಕ್ಕಾಗಿ 2ನೇ ಪತಿಯನ್ನು ಪತ್ನಿ ತನ್ನ ಸಹೋದರನ ಜತೆ ಸೇರಿ ಅಪಹರಣ ಮಾಡಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಕೊಳ್ಳೆಗಾಲದ ಬಳಿ ನಡೆದಿದೆ.
ಮುಡಿಗುಂಡ ಗ್ರಾಮದ ಸುಬ್ರಮಣ್ಯ ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸುಬ್ರಮಣ್ಯ ಹಾಗೂ ಅವರ ಪತ್ನಿ ರಶ್ಮಿ ನಡುವೆ ಹಣಕಾಸು ವಿಚಾರದಲ್ಲಿ ವೈಷಮ್ಯ ಉಂಟಾಗಿತ್ತು. ರಶ್ಮಿ ತನ್ನ ಸಹೋದರ ರಾಕೇಶ್, ಮುಡಿಗುಂಡದ ಪ್ರದೀಪ್, ರಾಕೇಶ್ ಪಡಗೂರು ಎಂಬುವವರೊಂದಿಗೆ ಸಂಚು ರೂಪಿಸಿ ಸುಬ್ರಮಣ್ಯನ್ನು ಅಪಹರಣ ಮಾಡಿ 5 ದಿನ ಗೃಹ ಬಂಧನದಲ್ಲಿಟ್ಟಿದ್ದರು.
ಈ ವೇಳೆ ನಾಲ್ವರು ಸುಬ್ರಮಣ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ರಾಡ್ನಿಂದ ಹಲ್ಲೆ ನಡೆಸಿ ಉಗುರು ಕಿತ್ತಿದ್ದರು. ಹಲ್ಲೆಯಿಂದ ಕುಸಿದಿದ್ದ ಸುಬ್ರಮಣ್ಯನನ್ನು 5 ದಿನಗಳ ನಂತರ ಅವರ ಗ್ರಾಮಕ್ಕೆ ಬಿಟ್ಟು ತಲೆಮರೆಸಿಕೊಂಡಿದ್ದರು.
ಕುಟುಂಬದವರು ಕೂಡಲೇ ಅವರನ್ನು ಕೊಳ್ಳೇಗಾಲದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಸಾಧ್ಯವಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ವಿಜಯನಗರ ಪೊಲೀಸರ ಮುಂದೆ ಹಲ್ಲೆ ನಡೆಸಿದವರ ಮಾಹಿತಿ ನೀಡಿ ಮೃತಪಟ್ಟರು.
ಮೈಸೂರು ವಿಜಯನಗರ ಪೊಲೀಸರು ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್)