

ಬೆಂಗಳೂರು: ಲಾಕ್ಡೌನ್ನಿಂದ ಜನರು ಎದುರಿಸುತ್ತಿರುವ ಸಮಸ್ಯೆ ಒಂದೆರಡಲ್ಲ. ರಾಷ್ಟ್ರೀಯ ಹಾಕಿ ತಂಡದ ಸದಸ್ಯ ಕರ್ನಾಟಕದ ಎಸ್ವಿ ಸುನೀಲ್, ಕೋವಿಡ್-19 ಮಹಾಮಾರಿಗೆ ಹೆದರಿ ಹಲವು ದಿನ ಗಳಿಂದ ತಮ್ಮ ಕುಟುಂಬ ಸದಸ್ಯರಿಂದ ದೂರವೇ ಉಳಿದಿದ್ದಾರೆ.
ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರದಲ್ಲಿ ರಾಷ್ಟ್ರೀಯ ಶಿಬಿರದಲ್ಲಿರುವ ಸುನೀಲ್, ಬೆಂಗಳೂರಿನಲ್ಲೇ ಇರುವ ಪತ್ನಿ ನಿಶಾ, ಪುತ್ರಿ ಶಾನ್ವಿತಾರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ‘ಶಿಬಿರದಲ್ಲಿರುವ ಬಹುತೇಕರಿಗೆ ಕುಟುಂಬ ಸದಸ್ಯರನ್ನು ನೋಡಬೇಕು ಎನಿಸುತ್ತದೆ. ಇಂಥ ಸಂದರ್ಭದಲ್ಲಿ ಸಾಧ್ಯವಾಗುತ್ತಿಲ್ಲ. ಕುಟುಂಬದ ಹಿತದೃಷ್ಟಿಯಿಂದ ಭೇಟಿಯಾಗಬಾರದು ಎಂದು ನಿರ್ಧರಿಸಿದ್ದೇನೆ’ ಎಂದು ಸುನೀಲ್ ಪ್ರತಿಕ್ರಿಯಿಸಿದ್ದಾರೆ.