

ಜೆರುಸಲೇಮ್: ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದ್ದ ಗಾಜಾ ಪಟ್ಟಿ ( Gaza Strip ) ಮತ್ತು ಇಸ್ರೇಲ್ ನಡುವಿನ ಯುದ್ಧ ಕೊನೆಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಿಂದ ಯುದ್ಧದ ಕಾರ್ಮೋಡ ಕರಗಿದೆ. ಇದರ ನಡುವೆ ಇಸ್ರೇಲ್ ಮತ್ತು ಗಾಜಾದ ಹಮಾಸ್ ಸಂಘಟನೆ ನಡುವೆ ಒತ್ತೆಯಾಳುಗಳ ವಿನಿಮಯವೂ ನಡೆದಿದೆ. ವರ್ಷಾನುಗಟ್ಟಲೇ ಜೈಲಿನಲ್ಲಿದ್ದು ಬಿಡುಗಡೆಯಾದವರು ಮರಳಿ ತಮ್ಮ ಗೂಡಿಗೆ ಸೇರಿದ್ದಾರೆ. ಹೀಗಿರುವಾಗ ಗಾಜಾ ಮೂಲದ ವ್ಯಕ್ತಿಯೊಬ್ಬರ ಕತೆ ಎಲ್ಲರ ಮನ ಮುಟ್ಟಿದೆ.
ಗಾಜಾ ಮೂಲದ ಛಾಯಾಗ್ರಾಹಕ ಶಾದಿ ಅಬು ಸಿಧು ಅವರು ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಇಸ್ರೇಲಿ ಜೈಲಿನಲ್ಲಿದ್ದರು. ಒಂದು ದಿನ ಇಸ್ರೇಲಿ ಅಧಿಕಾರಿಗಳು ಸಿಧು ಅವರ ಬಳಿ ಬಂದು ಗಾಜಾ ಮೇಲೆ ನಡೆದ ದಾಳಿಯಲ್ಲಿ ನಿಮ್ಮ ಪತ್ನಿ, ಮಕ್ಕಳು ಹಾಗೂ ಸಂಬಂಧಿಕರು ಸತ್ತಿದ್ದಾರೆ ಎಂದು ಹೇಳಿದರು. ಇದನ್ನು ಕೇಳಿದ ಸಿಧುಗೆ ಸಿಡಿಲು ಬಡಿದಂತಾಯಿತು. ಕೊನೆಯ ಬಾರಿಗೆ ತಮ್ಮ ಪ್ರೀತಿಪಾತ್ರರ ನಿರ್ಜೀವ ದೇಹಗಳನ್ನು ಸಹ ನೋಡಲು ಸಾಧ್ಯವಾಗಲಿಲ್ಲವಲ್ಲ ಎಂಬ ನೋವು ಸಿಧು ಅವರಲ್ಲಿತ್ತು. ಆದರೆ, ಜೈಲಿನಿಂದ ಬಿಡುಗೆಯಾದ ಬಳಿಕ ಸಿಧು ಅವರಿಗೆ ಒಂದು ಅಚ್ಚರಿ ಕಾದಿತ್ತು. ಆ ಅಚ್ಚರಿ ಏನೆಂದರೆ, ಅವರ ಪತ್ನಿ ಮತ್ತು ಮಕ್ಕಳು ಇನ್ನೂ ಜೀವಂತವಾಗಿದ್ದಾರೆ.
ಇಸ್ರೇಲ್ ಮತ್ತು ಗಾಜಾ ನಡುವಿನ ಕದನ ವಿರಾಮ ಒಪ್ಪಂದದ ಭಾಗವಾಗಿ, ಇಸ್ರೇಲ್ ಬಂಧನದಲ್ಲಿದ್ದ 2,000 ಜನರೊಂದಿಗೆ ಶಾದಿ ಅಬು ಸಿಧು ಅವರನ್ನೂ ಬಿಡುಗಡೆ ಮಾಡಲಾಗಿದೆ. ತನ್ನ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೀನಿ ಎಂಬ ದುಃಖದಲ್ಲೇ ಗಾಜಾದ ತಮ್ಮ ಸ್ವಂತ ನೆಲಕ್ಕೆ ಕಾಲಿಟ್ಟ ಅಬು ಸಿಧುಗೆ ಅಚ್ಚರಿ ಕಾದಿತ್ತು. ತನ್ನ ಹೆಂಡತಿ ಮತ್ತು ಮಕ್ಕಳನ್ನು ತನ್ನ ಕಣ್ಣ ಮುಂದೆ ನೋಡಿದಾಗ ಆತನ ಸಂತೋಷವನ್ನು ಪದಗಳಿಂದ ವರ್ಣಿಸಲು ಸಾಧ್ಯವಾಗಲಿಲ್ಲ.
ಈ ಬಗ್ಗೆ ಮಾತನಾಡಿರುವ ಸಿಧು, ನಾನು ಅವಳ (ಪತ್ನಿ) ಧ್ವನಿಯನ್ನು ಕೇಳಿದೆ. ಅಲ್ಲದೆ, ನನ್ನ ಮಕ್ಕಳ ಧ್ವನಿಗಳನ್ನು ಕೇಳಿದೆ. ಇದರಿಂದ ನನಗೆ ಒಂದು ಕ್ಷಣ ಆಘಾತವಾಯಿತು. ಆಕ್ಷಣದಲ್ಲಿ ಆ ಭಾವನೆಯನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿಯಲಿಲ್ಲ. ಅವರು ಜೀವಂತವಾಗಿದ್ದಾರೆ ಎಂಬುದೇ ಒಂದು ವರ್ಣನಾತೀತ ಭಾವನೆ ಎಂದು ಸಿಧು ಅವರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸೋಮವಾರ ಜೈಲಿನಿಂದ ಬಿಡುಗಡೆಯಾದಾಗಲೇ ಸಿಧು ಅವರಿಗೆ ತಮ್ಮ ಪ್ರೀತಿಪಾತ್ರರು ಇನ್ನೂ ಜೀವಂತವಾಗಿದ್ದಾರೆಂದು ಅರಿವಾಯಿತು. ಖಾನ್ ಯೂನಿಸ್ನಲ್ಲಿರುವ ತನ್ನ ಮನೆಗೆ ಬಂದಾಗ, ಅವನ ಪತ್ನಿ ಹನಾ ಬಹ್ಲುಲ್ ಅವನನ್ನು ದೀರ್ಘ ಅಪ್ಪುಗೆಯೊಂದಿಗೆ ಸ್ವಾಗತಿಸಿದಳು. ಮತ್ತೆಂದೂ ನೋಡಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದ್ದ ಆತನ ಮಗಳು ಮತ್ತು ಮಗನ ಮುಖಗಳನ್ನು ನೋಡಿದಾಗ, ಸಿಧು ಅವರಿಬ್ಬರನ್ನು ಅಪ್ಪಿಕೊಂಡು ನಿರಂತರವಾಗಿ ಚುಂಬಿಸಿದನು. ಅಂದಹಾಗೆ, 2024, ಮಾರ್ಚ್ 18ರಂದು ಉತ್ತರ ಗಾಜಾದ ಅಲ್-ಶಿಫಾ ಆಸ್ಪತ್ರೆಯಿಂದ ಅಬು ಸಿಧು ಅವರನ್ನು ಇಸ್ರೇಲಿ ಪಡೆಗಳು ಅಪಹರಿಸಿದ್ದವು.
2023, ಅ.7ರ ಶನಿವಾರದಂದು ಇಸ್ರೇಲ್ ಮತ್ತು ಗಾಜಾ ಪಟ್ಟಿ ನಡುವೆ ಯುದ್ಧ ಆರಂಭವಾಯಿತು. ಆರಂಭದಲ್ಲಿ ಹಮಾಸ್ ಉಗ್ರರು ಇಸ್ರೇಲ್ ಕಡೆ ಗುಂಡಿನ ಮಳೆಗೆರೆದರು. ಬಳಿಕ ಇಸ್ರೇಲ್ ಕೂಡ ಪ್ರತಿದಾಳಿ ನಡೆಸಿತು. ಇದರಿಂದ ಉಭಯ ದೇಶಗಳ ನಡುವೆ ಭೀಕರ ಯುದ್ಧ ಆರಂಭವಾಯಿತು. ಈ ಯುದ್ಧದಲ್ಲಿ ಹಮಾಸ್, ಕೆಲ ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿತು. ಅದೇ ರೀತಿ ಇಸ್ರೇಲ್ ಕೂಡ ಪ್ಯಾಲೆಸ್ತಿನಿಯರನ್ನು ಸೆರೆಹಿಡಿದಿತ್ತು. ಅಂತಿಮವಾಗಿ 2 ವರ್ಷಗಳ ಬಳಿಕ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಯುದ್ಧದ ಕಾರ್ಮೋಡ ಕರಗಿದೆ. ಹೀಗಾಗಿ ಒತ್ತೆಯಾಳುಗಳಿಗೂ ಬಿಡುಗಡೆ ಭಾಗ್ಯ ದೊರೆತಿದೆ. (ಏಜೆನ್ಸೀಸ್)