ಗಂಡನಿಗೆ ಶಿಶುಪಾಲನೆ ರಜೆ ಯಾಕೆ ಕೊಡಲ್ಲ?; ಮೇಲ್ಮನೆಯಲ್ಲಿ ಉತ್ತರ ಕೊಟ್ಟ ಸಿಎಂ

Leave
Published on

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ನೀಡುವ ಶಿಶುಪಾಲನಾ ರಜೆಯ ಮಾನದಂಡಗಳ ಬಗ್ಗೆ ಬಿಜೆಪಿಯ ಆಯನೂರು ಮಂಜುನಾಥ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದ ಪರಿ ಮೇಲ್ಮನೆಯನ್ನು ನಗೆಗಡಲಲ್ಲಿ ತೇಲಿಸಿತು. ‘ತಾವು ಜೆ.ಎಚ್.ಪಟೇಲರ ಗರಡಿಯಲ್ಲಿ ಪಳಗಿದವರು, ಹಾಸ್ಯದ ಮೂಲಕ ಸದನದ ದಿಕ್ಕು ತಪ್ಪಿಸುವ ಕಲೆ ಕರಗತವಾಗಿದೆ’ ಎಂದು ಆಯನೂರು, ಬೊಮ್ಮಾಯಿ ಕಾಲೆಳೆದರು. ಹಾಗೇನೂ ಇಲ್ಲ, ಪ್ರತಿ ಬಾರಿ ಮಂಜಣ್ಣನ ಪ್ರಶ್ನೆ ಬಂತೆಂದರೆ ನನಗೆ ಕುತೂಹಲ ಹೆಚ್ಚಾಗುತ್ತದೆ. ಅಂತಹ ಮಹತ್ವದ ವಿಚಾರವನ್ನೇ ಪ್ರಸ್ತಾಪಿಸುತ್ತಾರೆ ಅವರು ಎಂದು ಬೊಮ್ಮಾಯಿ ವಿವರಿಸತೊಡಗಿದರು.

18 ವರ್ಷ ಮಕ್ಕಳನ್ನು ತಾಯಿ ಆರೈಕೆ ಮಾಡಿದಂತೆ ತಂದೆ ಆರೈಕೆ ಮಾಡಲು ಸಾಧ್ಯವಿಲ್ಲ. ಪ್ರಸೂತಿ ಹಾಗೂ ಶಿಶುವಿಗೆ ಹಾಲುಣಿಸುವ ಸಂದರ್ಭದಲ್ಲಿ ತಾಯಿಯ ಆರೋಗ್ಯ ಸುಧಾರಿಸಿಕೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಕೇಂದ್ರ ಸರ್ಕಾರ ಈ ಅವಕಾಶ ನೀಡಿದೆ ಎಂದರು. ಮಧ್ಯಪ್ರವೇಶಿಸಿದ ಆಯನೂರು, ‘ಸ್ವಾಮೀ.. ಹೆಂಡತಿ ತೀರಿಹೋಗಿದ್ದರೆ ಗಂಡನಿಗೆ ಶಿಶುಪಾಲನೆ ರಜೆ ಕೊಡಲು ಏಕೆ ಸಾಧ್ಯವಿಲ್ಲ? ಅಲ್ಲದೆ, ಒಂದೇ ಇಲಾಖೆಯಲ್ಲಿನ ಮಹಿಳಾ ನೌಕರರು ಏಕಕಾಲಕ್ಕೆ ರಜೆ ಕೇಳಿದರೆ ಆ ಇಲಾಖೆಯಲ್ಲಿನ ಕೆಲಸಗಳಿಗೆ ಅನಾನುಕೂಲ ಹೆಚ್ಚಾಗಲ್ಲವೇ’ ಎಂದು ಪ್ರಶ್ನಿಸಿದರು. ‘ಅದೆಲ್ಲವೂ ದೈವೇಚ್ಛೆ’ ಎಂದು ಬೊಮ್ಮಾಯಿ ಉತ್ತರಿಸಿದರು. ಹಾಗಾದರೆ ಪುರುಷ ಫಲ ಏನಿಲ್ಲವೇ? ಎಂದು ಮಂಜುನಾಥ್ ಮರುಪ್ರಶ್ನಿಸಿದಾಗ, ಇಡೀ ಸಭೆ ನಗೆಗಡಲಲ್ಲಿ ತೇಲಿತು.

ಸಿಎಂ ಅಷ್ಟಕ್ಕೇ ನಿಲ್ಲಿಸಿದೆ ಶೇ.50 ಪಾಲು ಇರಲಿದೆ ಎಂದರು. 0-18 ವರ್ಷದ ಒಳಗಿನವರನ್ನು ಶಿಶು ಎಂದೇ ಪರಿಗಣಿಸಿದರೆ, ಬಾಲ್ಯಾವಸ್ಥೆ, ಪ್ರೌಢಾವಸ್ಥೆ ಹಾಗೂ ತಾರುಣ್ಯದ ವಿಂಗಡಣೆ ಹೇಗೆಂದು ಮತ್ತೆ ಪ್ರಶ್ನಿಸಿದರು. ಆಯಾ ವಯಸ್ಸಿಗೆ ತಕ್ಕಂತೆ ನಿಸರ್ಗವೇ ಸೂಚನೆ ನೀಡಿ ದೈಹಿಕ ಬದಲಾವಣೆ ತರುತ್ತದೆ ಎಂದುತ್ತರಿಸಿದ ಬೊಮ್ಮಾಯಿ, ಈ ಎಲ್ಲ ಗೊಂದಲಗಳಿಗೆ ಆಯನೂರು ಮಂಜಣ್ಣನ ನೇತೖತ್ವದಲ್ಲಿ ಸಭೆ ನಡೆಸಿ, ಕ್ರಮವಹಿಸುವುದಾಗಿ ತಿಳಿಸುವ ಮೂಲಕ ಮತ್ತೆ ಚಟಾಕಿ ಹಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net