ಸೆಲ್ಫಿ, ಫೋಟೋ ಕೇಳುವ ಫ್ಯಾನ್ಸ್​ಗೆ 'ನೋ' ಹೇಳಲ್ಲ ರಶ್ಮಿಕಾ! ಇದರ ಹಿಂದಿದೆ ಬಲವಾದ ಕಾರಣ | Rashmika Mandanna

ವಿಜಯವಾಣಿ - 2024-12-12T183220.542
Published on

Rashmika Mandanna: ರಕ್ಷಿತ್ ಶೆಟ್ಟಿ ಅಭಿನಯದ ಹಾಗೂ ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಬ್ಲಾಕ್​ಬಸ್ಟರ್​ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ, ಗುರುತಿಸಿಕೊಂಡವರು. ಸ್ಯಾಂಡಲ್​ವುಡ್​ ನಂತರದಲ್ಲಿ ತಮ್ಮ ನಟನೆಯ ಛಾಪನ್ನು ಟಾಲಿವುಡ್​ಗೆ ವಿಸ್ತರಿಸಿದ ನಟಿ, ತಿಳಿಯದ ಭಾಷೆಯಾದರೂ ನಟನಾ ಕೌಶಲ್ಯ ತೋರಿಸುವಲ್ಲಿ ಹಿಂದುಳಿಯಲಿಲ್ಲ. ಅಲ್ಲು ಅರ್ಜುನ್​, ಮಹೇಶ್​ ಬಾಬು, ವಿಜಯ್ ದೇವರಕೊಂಡ, ರಣಬೀರ್ ಕಪೂರ್​ನಂತಹ ಸ್ಟಾರ್​ ನಟರೊಂದಿಗೆ ನಟಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತುಗಳನ್ನು ನಟಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಟಾಲಿವುಡ್​ ಮಾತ್ರವಲ್ಲದೆ ಬಾಲಿವುಡ್​ನಲ್ಲಿಯೂ ನಟಿಸಿ, ಸೈ ಎನಿಸಿಕೊಂಡಿರುವ 'ನ್ಯಾಷನಲ್ ಕ್ರಶ್', ಅಪಾರ ಪ್ರಶಂಸೆ, ಮನ್ನಣೆ ಗಳಿಸಿದ್ದಾರೆ. ಸದ್ಯ ಚಿತ್ರಮಂದಿರಗಳಲ್ಲಿ ಪುಷ್ಪರಾಜ್​ನ ಶ್ರೀವಲ್ಲಿ ಆಗಿ ಮಿಂಚುತ್ತಿರುವ ರಶ್ಮಿಕಾ, 'ಪುಷ್ಪ 2' ಬ್ಲಾಕ್​ಬಸ್ಟರ್​ ಬೆನ್ನಲ್ಲೇ ಸಂದರ್ಶನದಲ್ಲಿ ಭಾಗಿಯಾಗಿ, ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಅಭಿಮಾನಿಗಳು ನನ್ನ ಬಳಿ ಫೋಟೋ, ಸೆಲ್ಫಿ ಕೇಳಿದಾಗ ನಾನ್ಯಾಕೆ ಕೊಡಲು ಹಿಂದೇಟು ಹಾಕುವುದಿಲ್ಲ ಎಂಬುದರ ಹಿಂದಿರುವ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ವಿಮಾನ ನನಗೆ ಕಾಯುವುದಿಲ್ಲ

"ನನಗೆ ಅದು ಸರಿ ಅನಿಸೋದಿಲ್ಲ. ಏಕೆಂದರೆ, ಇಂದು ನಾನೇನು ಆಗಿದ್ದೀನೋ, ಅದಕ್ಕೆ ಅವರೇ ಕಾರಣ. ಫ್ಯಾನ್ಸ್​ ಕೊಡುವ ಪ್ರೀತಿ, ಮೆಚ್ಚುಗೆ ಅಪಾರವಾದುದು. ಆ ಗೌರವದ ಬಗ್ಗೆ ನನಗೆ ಹೆಚ್ಚಿನ ಅರಿವಿದೆ. ಪ್ರತಿಯೊಬ್ಬರ ಸಮಯ, ಶ್ರಮವನ್ನು ನಾನು ಗೌರವಿಸುವೆ. ಆದರೆ, ಕೆಲವೊಮ್ಮೆ ಏರ್​ಪೋರ್ಟ್​ಗೆ ಹೋಗುತ್ತಿರುವಾಗ ಪೋಟೋ ಕೊಡಲು ಆಗುವುದಿಲ್ಲ. ಕಾರಣ, ಬಹಳ ಆತುರದಲ್ಲಿ ಇರುತ್ತೇನೆ. ಅಲ್ಲಿ ವಿಮಾನ ನನಗೆ ಕಾಯುವುದಿಲ್ಲ. ಇದು ಗೊತ್ತಿದ್ದರೂ ಕೂಡ ನನಗೆ ಹಾಗೇ ಹೋಗಲು ಮನಸ್ಸಾಗುವುದಿಲ್ಲ. ಓಟದ ಮಧ್ಯೆಯೇ ಕೆಲವರಿಗೆ ಫೋಟೋ ಕೊಟ್ಟು ಓಡುತ್ತೇನೆ" ಎಂದಿದ್ದಾರೆ.

1 ಸಾವಿರ ಕೋಟಿ ಕ್ಲಬ್​

"ಆ ಕ್ಷಣ ಅಭಿಮಾನಿಗಳತ್ತ ಕ್ಷಮೆ ಕೇಳುತ್ತ, ಎಷ್ಟು ಸಮಯ ಕೊಡಲು ಸಾಧ್ಯವಾಗುತ್ತದೆಯೋ, ಕೊಟ್ಟು ಆನಂತರ ಅಲ್ಲಿಂದ ತೆರೆಳುತ್ತೇನೆ" ಎಂದು ಹೇಳಿದ್ದಾರೆ. ಪ್ರಸ್ತುತ ಒಂದು ಸಾವಿರ ಕೋಟಿ ಕ್ಲಬ್​ ಸೇರಿರುವ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2', ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿರುವ ಚಿತ್ರ, ದಾಖಲೆಗಳನ್ನು ಮುರಿಯುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net