

ಮುಂಬೈ: ಬಾಲಿವುಡ್ನ ಸ್ಟಾರ್ ನಟ ರಣಬೀರ್ ಕಪೂರ್ ಈ ವರ್ಷದ ಆರಂಭದಲ್ಲಿ ಉತ್ತಮ ಯಶಸ್ಸನ್ನು ಹೊಂದಿದ್ದು, ಇತ್ತೀಚೆಗೆ ಬಿಡುಗಡೆಗೊಂಡ ರೋಮ್ಯಾಂಟಿಕ್-ಕಾಮಿಡಿ ಜಾನರ್ನ 'ತು ಜೂತಿ ಮೈನ್ ಮಕ್ಕರ್' ಚಿತ್ರದ ಗೆಲುವಿನ ಮೂಲಕ ಮತ್ತಷ್ಟು ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದಾರೆ.
ಇದೀಗ ಅವರ ಮುಂದಿನ 'ಅನಿಮಲ್' ಸಿನಿಮಾವು ಈ ಹಿಂದೆ ಹೇಳಿದಂತೆ ಆಗಸ್ಟ್ 11ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ, ಚಿತ್ರತಂಡ ಈಗ ದಿಢೀರ್ ಎಂಬಂತೆ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ. ಇದಕ್ಕೆ ಅಸಲಿ ಕಾರಣವೇನು ಎಂಬ ಹಲವು ಪ್ರಶ್ನೆಗಳು ಸಿನಿರಸಿಕರಲ್ಲಿ ಚರ್ಚೆಯಾಗುತ್ತಿದೆ.
ನಿಗದಿಪಡಿಸಿದಂತೆ ಚಿತ್ರತಂಡವು 'ಅನಿಮಲ್' ಸಿನಿಮಾವನ್ನು ಆಗಸ್ಟ್ 11 ರಂದು ತೆರೆಗೆ ತರಬೇಕಿತ್ತು. ಆದರೆ ಇದೀಗ ಬಿಡುಗಡೆಯನ್ನು ಡಿಸೆಂಬರ್ 1ಕ್ಕೆ ಮುಂದೂಡಿದೆ. ಈ ದಿನಾಂಕ ಕೂಡ ತಾತ್ಕಾಲಿಕ ಎಂದು ಹೇಳಲಾಗಿದೆ. ಈ ನಿರ್ಧಾರವನ್ನು ನಿರ್ಮಾಪಕರು ಮಾಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಸಿನಿಮಾ ಮುಂದೂಡಲು ಕಾರಣ ಆಗಸ್ಟ್ 10 ರಂದು ಜೈಲರ್, 11 ರಂದು ಚಿರಂಜೀವಿ ಅವರ ಭೋಲಾ ಶಂಕರ್ ಇದರೊಟ್ಟಿಗೆ ಗದರ್ 2 ಮತ್ತು ಓ ಮೈ ಗಾಡ್ 2 ಚಿತ್ರಗಳು ಸಾಲು ಸಾಲಾಗಿ ಬಿಡುಗಡೆಗೊಂಡು ಬಾಕ್ಸ್ ಆಫೀಸ್ನಲ್ಲಿ ಭಾರೀ ಪೈಪೋಟಿ ನೀಡುತ್ತಿವೆ.
ಈ ಸಿನಿಮಾಗಳ ಮಧ್ಯೆ ಅನಿಮಲ್ ಚಿತ್ರವನ್ನು ಈ ಹಿಂದೆ ನಿಗದಿಪಡಿಸಿದ ದಿನದಂದೇ ಬಿಡುಗಡೆಗೊಳಿಸಿದ್ದರೇ, ಬಾಕ್ಸ್ ಆಫೀಸ್ನಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗಿತ್ತು ಎಂಬ ಮುನ್ನೆಚ್ಚರಿಕೆಯಿಂದ ಚಿತ್ರತಂಡ ರಿಲೀಸ್ ಡೇಟ್ ಅನ್ನು ರದ್ದುಗೊಳಿಸಿ, ಇದೀಗ ಡಿಸೆಂಬರ್ 01ಕ್ಕೆ ಮುಂದೂಡಿದೆ ಎಂದು ಹೇಳಲಾಗಿದೆ. ಈ ವರದಿಯನ್ನು ತಿಳಿದ ಸಿನಿಪ್ರೇಕ್ಷಕರು ಮತ್ತು ನೆಟ್ಟಿಗರು ಚಿತ್ರ ತಯಾರಕರು ಉತ್ತಮ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ.
ಅನಿಮಲ್ ಚಿತ್ರದಲ್ಲಿ ರಣಬೀರ್ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡರೆ, ತೃಪ್ತಿ ದಿಮ್ರಿ, ಬಾಬಿ ಡಿಯೋಲ್, ಪರಿಣಿತಿ ಚೋಪ್ರಾ, ಅನಿಲ್ ಕಪೂರ್, ಸೌರಬ್ ಶುಕ್ಲಾ ಸೇರಿದಂತೆ ಮುಂತಾದವರ ತಾರಗಣವಿದೆ,(ಏಜೆನ್ಸೀಸ್).