ಗಿಡ ನೆಡುವುದು ಇಸ್ಲಾಂ ವಿರೋಧಿಯೇ? ಪಾಕಿಸ್ತಾನದಲ್ಲಿ ಸಸಿಗಳನ್ನು ಕಿತ್ತು ಹಾಕಿದ್ಯಾಕೆ ಜನರು?

Tree uprooting
Published on

ಇಸ್ಲಾಮಾಬಾದ್​: ಪರಿಸರದ ವಿಚಾರಕ್ಕೆ ಬಂದರೆ ಪಾಕಿಸ್ತಾನದಲ್ಲಿ ಅರಣ್ಯ ನಾಶ ಭಾರಿ ಪ್ರಮಾಣದಲ್ಲಾಗಿದೆ. ಪರಿಸರ ನಾಶದಿಂದಾಗಿ ಭಾರಿ ಸಂಕಷ್ಟಕ್ಕೊಳಗಾಗಿರುವ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು.

ಈ ಕಾರಣಕ್ಕೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಭಾನುವಾರ ದೇಶಾದ್ಯಂತ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಭಾನುವಾರ ಒಂದೇ ದಿನ 35 ಲಕ್ಷ ಸಸಿಗಳನ್ನು ನೆಡಲಾಗಿತ್ತು. ಇದು ಆರಂಭವಷ್ಟೇ ಎಂದು ಇಮ್ರಾನ್​ ಖಾನ್​ ಹೇಳಿದ್ದರು.

ಇದಾದ ಒಂದೇ ದಿನಕ್ಕೆ ಪಾಕಿಸ್ತಾನದ ಖೈಬರ್​ ಪ್ರಾಂತ್ಯದ ಮಂಡಿ ಖಾಸ್​ ಜಿಲ್ಲೆಯಲ್ಲಿ ನೆಟ್ಟಿದ್ದ ಗಿಡಗಳನ್ನು ಜನರು ಕಿತ್ತು ಹಾಕುತ್ತಿರುವ ವಿಡಿಯೋ ಭಾರಿ ವೈರಲ್​ ಆಗಿದೆ. ಗಿಡಗಳನ್ನು ನೆಡುವುದು ಇಸ್ಲಾಂ ವಿರೋಧಿಯಾಗಿದೆ. ಪ್ರಧಾನಿ ಇಮ್ರಾನ್​ ಖಾನ್​ ಗಿಡ ನೆಡಿ ಎಂದರೆ ಇವರು ಗಿಡಗಳನ್ನು ಕಿತ್ತು ಹಾಕುತ್ತಿದ್ದಾರೆ ಎಂಬ ಒಕ್ಕಣೆಯೊಂದಿಗೆ ವಿಡಿಯೋ ಭಾರಿ ವೈರಲ್​ ಆಗಿದೆ. ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದಾರೆ.

ಆದರೆ, ನಿಜಾಂಶವೇ ಬೇರೆಯಾಗಿತ್ತು. ಸಮಾ ಟವಿ ಪ್ರಕಾರ ಅದು ವಿವಾದಿತ ಜಾಗವಾಗಿತ್ತು ಅಲ್ಲಿ ನೆಟ್ಟಿದ್ದ 6,000 ಗಿಡಗಳನ್ನು ಸ್ಥಳೀಯರು ಧ್ವಂಸಗೊಳಿಸಿದ್ದಾರೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಎಂ ಮಹಮೂದ್​ ಖಾನ್​ ತಿಳಿಸಿದ್ದಾರೆ. ಬಳಿಕ ಸ್ಥಳೀಯರೇ ಮುಂದಾಗಿ ಮತ್ತೆ ಗಿಡಗಳನ್ನು ನೆಟ್ಟಿದ್ದಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net