ತಾಜ್​ ಮಹಲ್​ ಏಕೆ ಭಾರತದಲ್ಲಿದೆ? ಗಂಡ ಕೇಳಿದ ಪ್ರಶ್ನೆಗೆ ವಿದೇಶಿ ಮಹಿಳೆ ಕೊಟ್ಟ ಉತ್ತರ ವೈರಲ್​! Taj Mahal

Taj Mahal
Published on

Taj Mahal : ಪ್ರತಿದಿನ ಅನೇಕ ವಿದೇಶಿಯರು ಭಾರತಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ಅವರು ಹಂಚಿಕೊಳ್ಳುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅದೇ ರೀತಿ ಇದೀಗ ವಿದೇಶಿಯೊಬ್ಬರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿರುವ ಗಂಡ-ಹೆಂಡತಿಯ ಸಂಭಾಷಣೆ ಕೇಳಿ ಹುಬ್ಬೇರಿಸಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವಿದೇಶಿ ದಂಪತಿಗಳು ತಾಜ್ ಮಹಲ್ ಮುಂದೆ ನಿಂತಿರುವುದನ್ನು ಕಾಣಬಹುದು. ನಂತರ, ವಿಡಿಯೋದಲ್ಲಿರುವ ವ್ಯಕ್ತಿ ತನ್ನ ಹೆಂಡತಿಗೆ ತಾಜ್ ಮಹಲ್ ಭಾರತದಲ್ಲಿ ಏಕೆ ಇದೆ ಎಂದು ನಿನಗೆ ತಿಳಿದಿದೆಯೇ ಎಂದು ಕೇಳುತ್ತಾನೆ. ಪ್ರಶ್ನೆ ಕೇಳಿದ ತಕ್ಷಣ ಆಕೆ ನೀಡುವ ಮುಗ್ಧ ಉತ್ತರವು ಎಲ್ಲರ ಹುಬ್ಬೇರಿಸುತ್ತದೆ.

ಆಕೆ ಕೊಟ್ಟ ಉತ್ತರ ಏನೆಂದರೆ, ತಾಜ್​ ಮಹಲ್​ ತುಂಬಾ ಭಾರವಾಗಿದ್ದು, ಅದನ್ನು ಬ್ರಿಟನ್‌ಗೆ ಸ್ಥಳಾಂತರಿಸಲು ಸಾಧ್ಯವಿಲ್ಲದ ಕಾರಣದಿಂದ ಭಾರತದಲ್ಲೇ ಇದೆ ಎಂದು ಮಹಿಳೆ ಉತ್ತರಿಸುತ್ತಾಳೆ. ಈ ಉತ್ತರ ಕೇಳಿ ಒಂದು ಕ್ಷಣ ಅಚ್ಚರಿಗೀಡಾದ ಪತಿಗೆ ಆರಂಭದಲ್ಲಿ ಏನು ಹೇಳಬೇಕೆಂದು ತೋಚುವುದಿಲ್ಲ. ಬಳಿಕ, ಹೌದು ನೀನು ಹೇಳಿದ್ದು ಸರಿ ಇದೆ ಎನ್ನುತ್ತಾನೆ. ಅಲ್ಲಿಗೆ ವಿಡಿಯೋ ಕೊನೆಗೊಳ್ಳುತ್ತದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅಂದಹಾಗೆ, ದಂಪತಿ ವಾಸ್ತವವಾಗಿ ಕೋಲ್ಕತ್ತಾದ ಇಕೋ ಪಾರ್ಕ್‌ನಲ್ಲಿ ನಿಂತಿದ್ದಾರೆ. ಪ್ರಪಂಚದ ಎಲ್ಲ ಏಳು ಅದ್ಭುತಗಳ ಪ್ರತಿಕೃತಿಗಳು ಅಲ್ಲಿವೆ. ಈ ವಿಡಿಯೋವನ್ನು ದಂಪತಿ 'alexwandersyt' ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದು, ತರಹೇವಾರಿ ಕಾಮೆಂಟ್​ಗಳು ಹರಿದುಬರುತ್ತಿವೆ.

ಇನ್ನು ಭಾರತದಿಂದ ಬ್ರಿಟಿಷರು ಸಾಕಷ್ಟು ವಸ್ತುಗಳನ್ನು ಹೊತ್ತೊಯ್ದಿದ್ದು ಇತಿಹಾಸ. ನಮ್ಮಲ್ಲಿರುವ ಅನೇಕ ಸಂಪತ್ತನ್ನು ನಾಶ ಮಾಡಿ, ತಮ್ಮಲ್ಲಿಗೆ ಅನೇಕ ವಸ್ತುಗಳನ್ನು ದೋಚಿಕೊಂಡು ಹೋದರು. ಈ ಹಿನ್ನೆಲೆಯಲ್ಲಿ ವಿದೇಶಿ ಮಹಿಳೆ ತನ್ನ ಗಂಡನಿಗೆ ಹಾಸ್ಯಾತ್ಮಕವಾಗಿ ಉತ್ತರ ನೀಡಿದ್ದಾಳೆ.

ತಾಜ್​ ಮಹಲ್​ ಕುರಿತು

ತಾಜ್ ಮಹಲ್ ಭಾರತದ ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ನೆಲೆಸಿರುವ ವಿಶ್ವವಿಖ್ಯಾತ ಬಿಳಿ ಮಾರ್ಬಲ್​ನ ಮಹಾನ್ ಸ್ಮಾರಕವಾಗಿದೆ. ಮೊಘಲ್ ಚಕ್ರವರ್ತಿ ಶಹಜಹಾನ್ ತಮ್ಮ ಮೂರನೇ ಪತ್ನಿ ಮುಮ್ತಾಜ್​ಗಾಗಿ ಇದನ್ನು ನಿರ್ಮಿಸಿದರು. 1632ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿ 1653ರಲ್ಲಿ ಪೂರ್ಣಗೊಂಡಿತು. ಈ ಅದ್ಭುತವಾದ ರಚನೆಯು ಸುಮಾರು 22,000 ಕಾರ್ಮಿಕರ ಕೆಲಸದ ಫಲವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳವಾಗಿ ಮತ್ತು ಏಳು ಅದ್ಭುತಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿರುವ ಇದು ಮೊಘಲ್ ವಾಸ್ತುಶಿಲ್ಪದ ಮೇರು ಕೃತಿಯಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅದರ ಮನೋಹರ ಸೌಂದರ್ಯವನ್ನು ಆನಂದಿಸಲು ಪ್ರವಾಸಿಗರು ಆಗಮಿಸುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net