ಎಲ್ಲ ಕ್ಷೇತ್ರದಲ್ಲಿಯೂ ಗುಜರಾತ್ ಮಾದರಿ ಎನ್ನುವವರಿಗೆ ಶಿಕ್ಷಣದಲ್ಲಿ ಏಕೆ ಬೇಡ? ಸಚಿವ ಡಾ. ಸುಧಾಕರ್ ಪ್ರಶ್ನೆ

Dr M C Sudhakar
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತಿನಲ್ಲಿಯೇ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದನ್ನು ಕರ್ನಾಟಕದಲ್ಲಿ ಯಾವ ರೀತಿಯಲ್ಲಿ ತಿದ್ದುಪಡಿ ಮಾಡಬಹುದು ಎಂದು ಚಿಂತನೆ ನಡೆಸಲಾಗುತ್ತಿದೆ. ಆದರೆ, ಅಭಿವೃದ್ಧಿ ಸೇರಿ ಇನ್ನಿತರೆ ವಿಚಾರದಲ್ಲಿ ಗುಜರಾತ್ ಮಾದರಿ ಹೇಳುವವರು ಇದನ್ನೇಕೆ ವಿರೋಧಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಪ್ರಶ್ನಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರಿಗಿರುವ ಕುಲಾಧಿಪತಿ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ವಿಶ್ವವಿದ್ಯಾಲಯದ ಆಡಳಿತಾತ್ಮಕ ವಿಚಾರವಾಗಿ ಸಮಗ್ರವಾಗಿ ತಿದ್ದುಪಡಿ ಮಾಡಲಾಗುತ್ತಿದೆ. ಕುಲಪತಿಗಳ ಅಧಿಕಾರಾವಧಿ ಸೇರಿ ಎಲ್ಲವನ್ನೂ ಚರ್ಚಿಸಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಕಾರ್ಯಕ್ಷಮತೆ, ಆಡಳಿತ, ಹೊಣೆಗಾರಿಕೆ, ಹಣಕಾಸು ಯಾವ ರೀತಿ ಇರಬೇಕು ಎಂಬುದನ್ನು ಚರ್ಚಿಸಿದ ನಂತರ ಏನೇನು ತಿದ್ದುಪಡಿ ಮಾಡಬೇಕು ಎಂದು ಅಂತಿಮವಾಗಿ ಸಚಿವ ಸಂಪುಟದಲ್ಲಿ ನೀಡುವ ಸಲಹೆ ಮೇಲೆ ನಿರ್ಧಾರವಾಗಲಿದೆ. ಗುಜರಾತ್‌ನಲ್ಲಿ ರಾಜ್ಯಪಾಲರು ಕೇವಲ ಘಟಿಕೋತ್ಸವಕ್ಕೆ ಹಾಜರಾಗಲಿದ್ದಾರೆ. ಉಳಿದಂತೆ ನೇಮಕಾತಿ ಸೇರಿ ಎಲ್ಲವನ್ನು ರಾಜ್ಯ ಸರ್ಕಾರವೇ ಜವಾಬ್ದಾರಿ ಹೊರಲಿದೆ. ಅದನ್ನು ರಾಜ್ಯದಲ್ಲಿ ಯಾವ ರೀತಿಯಲ್ಲಿ ಅನುಷ್ಠಾನ ಮಾಡಬಹುದು ಎಂಬುದನ್ನು ಚರ್ಚಿಸಲಾಗುತ್ತಿದೆ ಎಂದರು.

ಕಳೆದ ಒಂದೂವರೆ ವರ್ಷದಲ್ಲಿ ಮಂತ್ರಿಯಾದ ನಂತರ ಹಲವು ಸಮಸ್ಯೆಗಳನ್ನು ನೋಡಿದ್ದೇವೆ. ಅದನ್ನು ಬಗೆಹರಿಸಲು ಕಾನೂನು ಸಲಹೆ ಪಡೆಯಲಿದ್ದು, ಬಳಿಕ ಸಚಿವ ಸಂಪುಟ ಸಭೆಗೆ ಕಳುಹಿಸಲಾಗುತ್ತದೆ. ಕಾನೂನು ಸಲಹೆ ಪಡೆಯುವ ಕೆಲಸ ಮುಗಿದರೆ ಬೆಳಗಾವಿ ಅಧಿವೇಶನದಲ್ಲಿ ಬರಬಹುದು. ಇಲ್ಲವಾದಲ್ಲಿ ಇಲ್ಲ ಎಂದರು.

ರಾಜ್ಯದಲ್ಲಿ ಪಚಾಯತ್‌ರಾಜ್ ಇಲಾಖೆ, ಕಾನೂನು, ಕೃಷಿ, ತೋಟಗಾರಿಕೆ,ತಾಂತ್ರಿಕ ಮತ್ತು ಆರೋಗ್ಯ ವಿಶ್ವವಿದ್ಯಾಲಯಗಳಿವೆ. ನಮ್ಮ ಇಲಾಖೆಗೆ ಸಂಬಂಧಿಸಿದ ವಿವಿಗಳಲ್ಲಿ ಸುಧಾರಣೆ ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.

ಈ ಹಿಂದೆ ಡಾ. ಜಿ. ಪರಮೇಶ್ವರ್ ಸಚಿವರಾಗಿದ್ದ ಅವಧಿಯಲ್ಲಿ ವಿಶ್ವವಿದ್ಯಾಲಯದ ಕಾಯ್ದೆ ತಿದ್ದುಪಡಿಯನ್ನು ರಾಷ್ಟ್ರಪತಿ ಅವರಿಗೆ ಕಳುಹಿಸಲಾಗಿತ್ತು. ಆ ನಂತರ ಮತ್ತೆ ಮಾರ್ಪಾಡು ಮಾಡುವ ಕೆಲಸಗಳನ್ನು ಮಾಡಿರಲಿಲ್ಲ ಎಂದರು.

ಅಂತಿಮವಾಗಿ ಕಾಯ್ದೆ ತಿದ್ದುಪಡಿಗೆ ರಾಜ್ಯಪಾಲರೇ ಸಹಿ ಹಾಕಬೇಕಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಾನೂನು ಅಡಿಯಲ್ಲಿ ಅವರ ವ್ಯಾಪ್ತಿ ಏನಿದೆ? ಎಷ್ಟು ದಿನಗಳಲ್ಲಿ ಅನುಮೋದನೆಯಾಗಿರುವ ಬಿಲ್ ಅನ್ನು ಇಡಬಹುದು? ಎಂದು ಮುಂದಿನ ದಿನಗಳಲ್ಲಿ ನೋಡೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net