ದೊಡ್ಡವರಾದ ಮೇಲೆ ಫ್ರೆಂಡ್ಸ್ ಮಾಡೋದು ಯಾಕೆ ಕಷ್ಟ? ಹೊಸ ಸ್ನೇಹ ಚಿಗುರಲು ಏನೂ ಮಾಡಬೇಕು! | Adult Friendship

ದೊಡ್ಡವರಾದ ಮೇಲೆ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಯಾಕೆ ಕಷ್ಟ? ಸಮಯದ ಕೊರತೆ, ತಿರಸ್ಕಾರದ ಭಯದ ನಡುವೆಯೂ ಸ್ನೇಹ ಬೆಳೆಸಲು ಇಲ್ಲಿವೆ ಸರಳ ಟಿಪ್ಸ್​.
Adult Friendship
ದೊಡ್ಡವರಾದ ಮೇಲೆ ಸ್ನೇಹಿತರನ್ನು ಮಾಡಿಕೊಳ್ಳುವುದು ಯಾಕೆ ಕಷ್ಟ?
Published on: 

Friendship Tips: ಚಿಕ್ಕವರಿದ್ದಾಗ ಸ್ಕೂಲ್‌, ಟ್ಯೂಷನ್‌, ಕಾಲೇಜು ಅಂತ ಫ್ರೆಂಡ್ಸ್ ಆಗೋದು ತುಂಬಾ ಈಸಿ. ಪ್ರತಿದಿನ ಭೇಟಿಯಾಗೋದು, ಒಟ್ಟಿಗೆ ಓದೋದು, ಆಟ ಆಡೋದು ಹೀಗೆ ಸ್ನೇಹ ತಾನಾಗಿಯೇ ಬೆಳೆದಿರುತ್ತೆ. ಆದ್ರೆ ದೊಡ್ಡವರಾದ್ಮೇಲೆ ಕೆಲಸ, ಮನೆ ಜವಾಬ್ದಾರಿ ಅಂತ ಬ್ಯುಸಿಯಾಗ್ಬಿಡ್ತೀವಿ. ಹೊಸಬರನ್ನ ಮೀಟ್ ಮಾಡೋಕೆ ಟೈಮೇ ಸಿಗಲ್ಲ. ಕೆಲವೊಮ್ಮೆ ಮನಸ್ಸು ಬಿಚ್ಚಿ ಮಾತಾಡೋಕೆ ಯಾರಾದ್ರೂ ಬೇಕು ಅನ್ಸುತ್ತೆ. ಆದ್ರೆ ಹೊಸಬರ ಹತ್ರ ಮಾತು ಶುರು ಮಾಡೋಕೆ ಏನೋ ಒಂದು ಹಿಂಜರಿಕೆ.

ಮಾನಸಿಕ ಆರೋಗ್ಯ ತಜ್ಞರ ಪ್ರಕಾರ, ಸ್ಕೂಲ್‌ ಮತ್ತು ಕಾಲೇಜು ದಿನಗಳಲ್ಲಿ ಒಂದೇ ಕ್ಲಾಸ್‌, ಟ್ಯೂಷನ್‌ ಅಥವಾ ಒಂದೇ ರೀತಿಯ ಆಸಕ್ತಿಗಳ ಮೂಲಕ ಫ್ರೆಂಡ್ಸ್ ಆಗೋಕೆ ಸಾಕಷ್ಟು ಅವಕಾಶಗಳಿರುತ್ತವೆ. ಆದ್ರೆ ಕೆಲಸಕ್ಕೆ ಸೇರಿದ್ಮೇಲೆ ಅಂಥ ಅವಕಾಶಗಳು ಕಡಿಮೆಯಾಗುತ್ತವೆ. ಹೀಗಾಗಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳಬೇಕಂದ್ರೆ ನಾವೇ ಸ್ವಲ್ಪ ಪ್ರಯತ್ನ ಹಾಕಬೇಕು.

ದೊಡ್ಡವರಾದ ಮೇಲೆ ಫ್ರೆಂಡ್ಸ್ ಮಾಡೋದು ಯಾಕೆ ಕಷ್ಟ? ಇಲ್ಲಿವೆ 3 ಕಾರಣಗಳು

1. ಸಮಯವೇ ಸಿಗಲ್ಲ

ಕೆಲಸ, ಮನೆ ಜವಾಬ್ದಾರಿ ಅಂತ ದಿನವಿಡೀ ಬ್ಯುಸಿ ಇರುತ್ತೇವೆ. ಹೀಗಾಗಿ ಹೊಸಬರನ್ನ ಮೀಟ್ ಮಾಡೋಕೆ, ಅವರ ಜತೆ ಸಮಯ ಕಳೆಯೋಕೆ ಟೈಮ್‌ ಮತ್ತು ಎನರ್ಜಿ ಎರಡೂ ಇರಲ್ಲ.

2. ಅವರು ಏನಂದುಕೊಳ್ತಾರೋ ಅನ್ನೋ ಭಯ!

‘ನಾನೇ ಹೋಗಿ ಮಾತಾಡಿದ್ರೆ ಅವರು ಸರಿಯಾಗಿ ರೆಸ್ಪಾನ್ಸ್ ಮಾಡ್ತಾರಾ?’, ‘ನಾನೇ ಜಾಸ್ತಿ ಆಸಕ್ತಿ ತೋರಿಸಿದ ಹಾಗಾಗುತ್ತಾ?’ ಅನ್ನೋ ಯೋಚನೆಗಳು ಕಾಡುತ್ತವೆ. ಇದೇ ಕಾರಣಕ್ಕೆ ಇಬ್ಬರಿಗೂ ಸ್ನೇಹ ಮಾಡಿಕೊಳ್ಳಬೇಕು ಅನ್ನಿಸಿದ್ರೂ ಯಾರೂ ಮೊದಲು ಮಾತು ಶುರು ಮಾಡಲ್ಲ.

3. ಜೀವನ ಬದಲಾದಂತೆ ಸ್ನೇಹವೂ ಬದಲಾಗುತ್ತೆ!

ಹೊಸ ಊರಿಗೆ ಶಿಫ್ಟ್ ಆಗೋದು, ಕೆಲಸ ಬದಲಾಯಿಸೋದು, ಮದುವೆ ಅಥವಾ ಮಕ್ಕಳ ಜವಾಬ್ದಾರಿ ಹೆಚ್ಚಾಗೋದು ಹೀಗೆ ಜೀವನದಲ್ಲಿ ಬದಲಾವಣೆಗಳಾದಾಗ ಹಳೆಯ ಫ್ರೆಂಡ್ಸ್ ಜತೆಗಿನ ಸಂಪರ್ಕ ಕಡಿಮೆಯಾಗಬಹುದು. ಆಗ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಅಗತ್ಯ ಎದುರಾಗುತ್ತೆ.

A smile, a new friendship.
ಒಂದು ಸ್ಮೈಲ್‌ ಹೊಸ ಸ್ನೇಹಕ್ಕೆ ನಾಂದಿಯಾಗಬಹುದು

ಹೊಸ ಫ್ರೆಂಡ್ಸ್ ಮಾಡಿಕೊಳ್ಳೋದು ಹೇಗೆ? ಈ 3 ಟಿಪ್ಸ್ ಟ್ರೈ ಮಾಡಿ

1. ನಿಮಗೆ ಇಷ್ಟವಾದ ಚಟುವಟಿಕೆಗಳಲ್ಲಿ ಭಾಗವಹಿಸಿ

ಜಿಮ್‌, ಯೋಗ ಕ್ಲಾಸ್‌, ಬುಕ್ ಕ್ಲಬ್‌, ಹವ್ಯಾಸದ ತರಗತಿಗಳು ಅಥವಾ ಸ್ವಯಂಸೇವಾ ಕಾರ್ಯಕ್ರಮಗಳಿಗೆ ಹೋಗಿ. ನಿಮ್ಮ ಆಸಕ್ತಿ ಹೊಂದಿರುವ ಜನ ಸಿಕ್ಕಾಗ ಮಾತು ಶುರು ಮಾಡೋದು ಸುಲಭವಾಗುತ್ತೆ. ಸ್ನೇಹ ಬೆಳೆಸೋಕೂ ಒಳ್ಳೆಯ ಅವಕಾಶ ಸಿಗುತ್ತೆ.

2. ನೀವೇ ಮೊದಲು ಮಾತಾಡಿಸಿ

ಆಫೀಸ್‌ನಲ್ಲಿ ಸಹೋದ್ಯೋಗಿಯ ಜತೆ ಮಾತು ಶುರು ಮಾಡೋದು, ಕಾಫಿಗೆ ಕರೆಯೋದು ಅಥವಾ ಅವರ ಹವ್ಯಾಸಗಳ ಬಗ್ಗೆ ಕೇಳೋದು ಸ್ನೇಹಕ್ಕೆ ಮೊದಲ ಹೆಜ್ಜೆಯಾಗಬಹುದು. ಆರಂಭದಲ್ಲಿ ಸ್ವಲ್ಪ ಮುಜುಗರ ಆಗಬಹುದು. ಆದ್ರೆ ಪದೇಪದೇ ಹೀಗೆ ಮಾತಾಡಿಸಿದಾಗ ಅದು ಸಹಜವಾಗುತ್ತೆ.

3. ಸ್ನೇಹ ಅಂದ್ರೆ ಬೆಸ್ಟ್ ಫ್ರೆಂಡ್ ಮಾತ್ರ ಅಲ್ಲ

ನಿಮ್ಮ ಪ್ರತಿಯೊಬ್ಬ ಫ್ರೆಂಡ್‌ ಕೂಡ ಜೀವನಪರ್ಯಂತ ಜೊತೆಯಲ್ಲೇ ಇರಬೇಕು ಅಂತೇನಿಲ್ಲ. ಕೆಲವರು ಜಿಮ್‌ನಲ್ಲಿ ಜತೆಯಾಗ್ತಾರೆ, ಇನ್ನು ಕೆಲವರು ಟ್ರಿಪ್‌ಗೆ ಬರ್ತಾರೆ. ಮತ್ತೊಂದಿಷ್ಟು ಜನ ಕೆಲಸದ ವಿಚಾರದಲ್ಲಿ ಸಹಾಯ ಮಾಡ್ತಾರೆ. ಹೀಗೆ ಬೇರೆ ಬೇರೆ ರೀತಿಯ ಸ್ನೇಹಕ್ಕೂ ಅವಕಾಶ ಕೊಟ್ಟಾಗ ಹೊಸ ಸಂಬಂಧಗಳು ಬೆಳೆಯುತ್ತವೆ.

Friendship as life changes
ಬದುಕು ಬದಲಾದಂತೆ ಗೆಳೆತನವೂ ಬದಲಾಗುತ್ತೆ

ಸಣ್ಣ ಮಾತುಕತೆಯಿಂದಲೇ ಶುರುವಾಗಲಿ ಹೊಸ ಸ್ನೇಹ

ದೊಡ್ಡವರಾದ್ಮೇಲೆ ಒಂಟಿತನ ಕಾಡೋದು, ಹೊಸಬರ ಜತೆ ಬೆರೆಯೋಕೆ ಹಿಂಜರಿಕೆಯಾಗೋದು ಸಾಮಾನ್ಯ. ಆದ್ರೆ ಯಾರಾದ್ರೂ ಬಂದು ನಮ್ಮ ಜತೆ ಮಾತಾಡಲಿ ಅಂತ ಕಾಯ್ತಾ ಕೂರೋ ಬದಲು, ನಾವೇ ಒಂದು ಸಣ್ಣ ಮಾತಿನಿಂದ ಶುರು ಮಾಡಬಹುದು.

ಇದನ್ನೂ ಓದಿ: AI ದುರ್ಬಳಕೆ, ಅಣ್ವಸ್ತ್ರ ಯುದ್ಧದಿಂದ ಮಾನವಕುಲಕ್ಕೆ ಕುತ್ತು? 2100ರ ಬಗ್ಗೆ ತಜ್ಞರು ಹೇಳಿದ್ದೇನು? | AI Risk

ನಿಮ್ಮ ಹಾಗೆಯೇ ಹೊಸ ಫ್ರೆಂಡ್ಸ್ ಮಾಡಿಕೊಳ್ಳಬೇಕು ಅಂತ ಆಸೆ ಇದ್ರೂ ಹೇಗೆ ಶುರು ಮಾಡಬೇಕು ಅಂತ ಗೊತ್ತಿಲ್ಲದವರು ಸಾಕಷ್ಟು ಜನ ಇರ್ತಾರೆ. ಹಾಗಾಗಿ ಒಂದು ಸ್ಮೈಲ್‌, ಒಂದು ಸಣ್ಣ ಮಾತುಕತೆ ಅಥವಾ ಕಾಫಿಗೆ ಕೊಡುವ ಆಹ್ವಾನವೂ ಹೊಸ ಸ್ನೇಹಕ್ಕೆ ನಾಂದಿಯಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net