ಕಾಂಗ್ರೆಸ್‌ನವರನ್ನು ವಿಲನ್ ಮಾಡುತ್ತಿರುವುದೇಕೆ?; ಶಾಸಕ ಎಚ್.ಸಿ ಬಾಲಕೃಷ್ಣ ಪ್ರಶ್ನೆ

hc balakrishna
Published on

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್‌ನವರನ್ನು ವಿಲನ್ ಮಾಡುತ್ತಿರುವುದೇಕೆ? ಇದ್ಯಾವ ನ್ಯಾಯ? ಎಂದು ಶಾಸಕ ಬಾಲಕೃಷ್ಣ ಪ್ರಶ್ನಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಡಿ ಮಾಡಿಕೊಂಡಿದ್ದು ಜೆಡಿಎಸ್‌ನವರು, ಅದನ್ನು ಬಹಿರಂಗಗೊಳಿಸಿದ್ದು ಬಿಜೆಪಿಯವರು. ಪ್ರಜ್ವಲ್ ಗೆ ಈ ರೀತಿ ಮಾಡುವಂತೆ ನಾವು ಹೇಳಿದ್ದೆವಾ? ಡಿ.ಕೆ ಶಿವಕುಮಾರ್ ಅವರು ಫೋನ್ ಮಾಡಿ ಪ್ರಜ್ವಲ್ಗೆ ಸಿಡಿ ಮಾಡಲು ಹೇಳಿದ್ದರಾ? ಅಥವಾ ನಾವು ಅವರ ರೂಮ್ ನಲ್ಲಿ ನಿಂತು ಸಿಡಿ ಮಾಡಿದ್ದೇವಾ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರೇನೋ ತಲೆಕೆಟ್ಟವರಂತೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹೊರತಾಗಿ ಬೇರೆ ಯಾರೂ ಕಾಣುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ನಿದ್ದೆಯಲ್ಲೂ ಡಿ.ಕೆ. ಶಿವಕುಮಾರ್ ಹೆಸರು ಕನವರಿಸುತ್ತಾರೆ ಎಂದು ಕುಟುಕಿದರು.
ಒಕ್ಕಲಿಗರ ನಾಯಕತ್ವ ಈ ಹಿಂದೆ ಜನತಾ ದಳದಲ್ಲಿತ್ತು. ಈಗ ಅದು ಛಿದ್ರವಾಗಿದೆ. ಎಲ್ಲಾ ಪಕ್ಷದಲ್ಲೂ ಒಕ್ಕಲಿಗರು ಗುರುತಿಸಿಕೊಳ್ಳುತ್ತಿದ್ದಾರೆ. ಒಕ್ಕಲಿಗರ ಪ್ರಾಬಲ್ಯ ನಾಯಕತ್ವ ಈಗ ಕಾಂಗ್ರೆಸ್‌ನಲ್ಲಿದೆ. ಜೆಡಿಎಸ್ ನವರು ಒಕ್ಕಲಿಗರ ನಾಯಕತ್ವವನ್ನು ಮೋದಿ ಪಾದಕ್ಕೆ ಅಡವಿಟ್ಟಿದ್ದಾರೆ. ಬಿಜೆಪಿಯಲ್ಲಿ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡುತ್ತಾರಾ? ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.
ಎಚ್.ಡಿ.ಕುಮಾರಸ್ವಾಮಿ ಇಷ್ಟು ದಿನ ಎರಡೂ ಕಡೆ ಬ್ಯಾಲೆನ್ಸ್ ಮಾಡಿ ಸಿಎಂ ಆಗುತ್ತಿದ್ದರು. ಈಗ ಬಿಜೆಪಿಯಲ್ಲಿ ಅದೆಲ್ಲಾ ನಡೆಯುವುದಿಲ್ಲ. ಬಿಜೆಪಿಯವರು ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಏನೆಲ್ಲಾ ಮಾಡಿದ್ದಾರೆ ಎಂದು ಗೊತ್ತಿರುವ ವಿಚಾರ ಎಂದರು.
ತನ್ನ ಮಗ, ತನ್ನ ಮೊಮ್ಮಗ ಸಿಡಿ ಮಾಡಿರುವ ಬಗ್ಗೆ ಗೊತ್ತಿದ್ದರೂ ಅವರಿಗೆ ಪುತ್ರ ಹಾಗೂ ಮೊಮ್ಮಗನ ವ್ಯಾಮೋಹ ಯಾಕೆ ಬೇಕಿತ್ತು? ಅವನಿಗೆ ಯಾಕೆ ಟಿಕೆಟ್ ಕೊಟ್ಟರು. ಟಿಕೆಟ್ ಕೊಡದಿದ್ದರೆ ಇದ್ಯಾವುದೂ ಆಚೆ ಬರುತ್ತಿರಲಿಲ್ಲ. ಈ ಬಗ್ಗೆ ಅಮಿತ್ ಶಾ ಅವರೇ ಟಿಕೆಟ್ ನೀಡಬೇಡಿ ಎಂದು ಹೇಳಿದ್ದಾರೆ. ಆದರೂ ದೇವೇಗೌಡರಿಗೆ ಆ ರೀತಿ ವ್ಯಾಮೋಹ ಯಾಕೆ? ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net