ನಮಗೆ ನಾವೇ ಎಡವಿದರೂ ವಸ್ತುಗಳ ಮೇಲೆ ಯಾಕೆ ಸಿಟ್ಟು? ಇದರ ಹಿಂದೆ ಇದೆ ಅಚ್ಚರಿಯ ಸೈಕಲಾಜಿ | Psychology

Human Psychology
ಪೆಟ್ಟು ತಿಂದಾಗ ಕಲ್ಲಿಗೆ ಬೈಯೋದು ಯಾಕೆ ಗೊತ್ತಾ?
Published on: 

Human Behavior: ದಾರಿಲಿ ಹೋಗುವಾಗ ಕಾಲಿಗೇನಾದರೂ ಕಲ್ಲು ತಗಲಿದ್ರೆ ಅಥವಾ ಗೋಡೆಗೆ ಗುದ್ದಿಕೊಂಡರೆ ಸಾಕು, ನಮಗೆ ತಕ್ಷಣ ಮೈಯೆಲ್ಲಾ ಉರಿಯುತ್ತೆ. ತಕ್ಷಣ ಆ ಕಲ್ಲಿಗೋ ಗೋಡೆಗೋ ನಾಲ್ಕು ಬೈದು, ಇಲ್ಲಾಂದ್ರೆ ಕಾಲಿನಿಂದ ಒದ್ದು ಕೋಪ ತೀರಿಸಿಕೊಳ್ಳುತ್ತೇವೆ. ನಾವೇ ಎಚ್ಚರಿಲ್ಲದೆ ಬಿದ್ದರೂ ಆ ವಸ್ತುವಿನ ಮೇಲೆ ರೇಗೋದು ಬಹುತೇಕರ ಅಭ್ಯಾಸ.

ಇದು ಮೂರ್ಖತನ ಅಥವಾ ಹುಚ್ಚಾಟ ಅಂತ ತುಂಬಾ ಜನ ಅಂದುಕೋತಾರೆ. ಆದ್ರೆ, ಮನಃಶಾಸ್ತ್ರದ ಪ್ರಕಾರ ಇದರ ಹಿಂದೆ ತುಂಬಾನೇ ಆಳವಾದ ಮಾನಸಿಕ ಹಾಗೂ ವೈಜ್ಞಾನಿಕ ಕಾರಣಗಳಿವೆಯಂತೆ. ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಮೆದುಳು ಬಳಸುವ ಕೆಲವು ರಕ್ಷಣಾತ್ಮಕ ತಂತ್ರಗಳು ಇಲ್ಲಿವೆ

1. ಅನಿಮಿಸಂ ಮತ್ತು ಹೈಪರ್-ಆಕ್ಟಿವ್ ಏಜೆನ್ಸಿ ಡಿಟೆಕ್ಷನ್

ಪ್ರಸಿದ್ಧ ಮನಃಶಾಸ್ತ್ರಜ್ಞ ಜೀನ್ ಪಿಯಾಗೆಟ್ ಪ್ರಕಾರ, ಮಕ್ಕಳಿಗೆ 7 ವರ್ಷ ತುಂಬುವವರೆಗೂ ಜಗತ್ತಿನ ಪ್ರತಿಯೊಂದು ವಸ್ತುವಿಗೂ ಜೀವ ಮತ್ತು ಭಾವನೆಗಳಿವೆ ಎಂದೇನಿಸುತ್ತದೆ. ಇದಕ್ಕೆ 'ಅನಿಮಿಸಂ' ಅಂತಾರೆ. ಚಿಕ್ಕವರಿದ್ದಾಗ ನಾವು ನೆಲಕ್ಕೆ ಬಿದ್ದಾಗ, ಅಮ್ಮಂದಿರು "ಅಯ್ಯೋ ನೆಲಕ್ಕೆ ಒಂಚೂರು ಹೊಡಿ, ಪಾಪ ಅದು ತಾನೇ ಬರ್‍ತು" ಅಂತ ಸಮಾಧಾನ ಮಾಡ್ತಿದ್ರಲ್ಲವೇ? ಅಂತಹ ಸಣ್ಣಪುಟ್ಟ ಅಭ್ಯಾಸಗಳೇ ನಮ್ಮ ಸುಪ್ತ ಮನಸ್ಸಿನಲ್ಲಿ ಹಾಗೇ ಉಳಿದುಬಿಡುತ್ತವೆ.

Kicking a stone when one slips
ಕಾಲು ಜಾರಿದಾಗ ಕಲ್ಲಿಗೆ ಒದೆಯೋದು ಹುಚ್ಚುತನವಲ್ಲ

ಹಾಗೇ ನೋಡಿದ್ರೆ, ಮನುಷ್ಯನ ವಿಕಾಸದ ಹಾದಿಯಲ್ಲಿ ನಮ್ಮ ಮೆದುಳು 'ಹೈಪರ್-ಆಕ್ಟಿವ್ ಏಜೆನ್ಸಿ ಡಿಟೆಕ್ಷನ್' ಎಂಬ ವಿಶೇಷ ವ್ಯವಸ್ಥೆಯನ್ನು ಬೆಳೆಸಿಕೊಂಡಿದೆ. ಕತ್ತಲಲ್ಲಿ ಕಲ್ಲು ಕಂಡರೂ ಹಾವಿರಬಹುದೆಂದು ಭಾವಿಸಿ ಎಚ್ಚೆತ್ತುಕೊಳ್ಳುವುದು ನಮ್ಮ ರಕ್ಷಣಾ ಸ್ವಭಾವ. ಅದೇ ರೀತಿ, ಕಲ್ಲು ಎಡವಿದ ತಕ್ಷಣ ಮೆದುಳು ಅದನ್ನು ನಿರ್ಜೀವ ವಸ್ತು ಎಂದುಕೊಳ್ಳದೆ, ‘ನಮಗೆ ಬೇಕೆಂದೇ ಪೆಟ್ಟು ಕೊಡಲು ಬಂದ ಶತ್ರು’ ಎಂದು ತಕ್ಷಣವೇ ಭಾವಿಸಿಬಿಡುತ್ತದೆ.

2. ಭಾವನೆಗಳ ವರ್ಗಾವಣೆ

ಖ್ಯಾತ ಮನೋವಿಶ್ಲೇಷಕ ಸಿಗ್ಮಂಡ್ ಫ್ರಾಯ್ಡ್ ಪ್ರಕಾರ, ಇದು ನಮ್ಮ ಮನಸ್ಸಿನ ಒಂದು ರಕ್ಷಣಾತ್ಮಕ ತಂತ್ರ (Defense Mechanism). ದಾರಿಯಲ್ಲಿ ಹೋಗುವಾಗ ನಾವೇ ಎಚ್ಚರಿಲ್ಲದೆ ಕಲ್ಲಿಗೆ ಎಡವಿಕೊಂಡರೂ ‘ನಾನು ಜಾಗರೂಕನಾಗಿರಲಿಲ್ಲ‘ ಅಂತ ಒಪ್ಪಿಕೊಳ್ಳೋಕೆ ನಮ್ಮ ಅಹಂ (Ego) ಬಿಡೋದಿಲ್ಲ. ಆ ತಪ್ಪನ್ನು ಮತ್ತು ಅದರಿಂದ ಆದ ನೋವಿನ ಕೋಪವನ್ನು ನಮ್ಮ ಮೇಲೆಯೇ ಹಾಕಿಕೊಂಡರೆ ಕೀಳರಿಮೆ ಕಾಡುತ್ತೆ. ಅದಕ್ಕೇ, ಆ ಕೋಪವನ್ನು ತಕ್ಷಣವೇ ಎದುರಿಗಿರುವ ಕಲ್ಲಿನ ಮೇಲೆ ಹಾಕಿ ನಾವು ನಿರಾಳವಾಗಿಬಿಡ್ತೀವಿ.

3. ಕ್ಯಾಥಾರ್ಸಿಸ್

ಅಚಾನಕ್ಕಾಗಿ ಪೆಟ್ಟಾದಾಗ ದೇಹದಲ್ಲಿ ಅಡ್ರಿನಾಲಿನ್ ಹಾರ್ಮೋನ್ ಬಿಡುಗಡೆಯಾಗಿ ತೀವ್ರ ಕೋಪ ಉಂಟಾಗುತ್ತದೆ. ಆ ನೋವು ಹಾಗೂ ಆಕ್ರೋಶದ ಶಕ್ತಿಯನ್ನು ಹೊರಹಾಕಲು ವಸ್ತುವಿಗೆ ಬೈಯುವುದು ಅಥವಾ ಒದೆಯುವುದು ಒಂದು ಮಾಧ್ಯಮವಾಗುತ್ತದೆ. ಇದರಿಂದ ನೆಗೆಟಿವ್ ಎನರ್ಜಿ ಹೊರಹೋಗಿ, ಮನಸ್ಸು ಬೇಗನೆ ಶಾಂತವಾಗುತ್ತದೆ. ಇದನ್ನೇ ಮನಃಶಾಸ್ತ್ರದಲ್ಲಿ 'ಕ್ಯಾಥಾರ್ಸಿಸ್' ಅಂತ ಕರೆಯೋದು.

Human Behavior
ನಮ್ಮದೇ ತಪ್ಪಿದ್ದರೂ ವಸ್ತುಗಳ ಮೇಲೆ ಕೋಪ

4. ಭ್ರಮೆಯ ನಿಯಂತ್ರಣ

ನಮಗೆ ತಿಳಿಯದಂತೆ ಏನಾದರೂ ಆಘಾತವಾದಾಗ ‘ನನ್ನ ನಿಯಂತ್ರಣ ತಪ್ಪಿಹೋಯಿತು’ ಎಂಬ ಅಸಹಾಯಕತೆ ಕಾಡುತ್ತದೆ. ಆದರೆ, ಯಾವಾಗ ನಾವು ಆ ವಸ್ತುವಿಗೆ ಪ್ರತಿಯಾಗಿ ಹೊಡೆಯುತ್ತೇವೆಯೋ, ಆಗ ‘ಪರಿಸ್ಥಿತಿ ಈಗ ನನ್ನ ಹತೋಟಿಯಲ್ಲಿದೆ, ನಾನು ಸುಮ್ಮನೆ ಪೆಟ್ಟು ತಿನ್ನಲಿಲ್ಲ’ ಎಂಬ ಒಂದು ಸುಳ್ಳು ತೃಪ್ತಿಯನ್ನು ನಮ್ಮ ಮೆದುಳು ಸೃಷ್ಟಿಸಿಕೊಳ್ಳುತ್ತದೆ.

ಇದನ್ನೂ ಓದಿ: ನಂಜನಗೂಡಿನಲ್ಲಿ 'ಆಪರೇಷನ್ ಟೈಗರ್': ಡ್ರೋನ್ ಕ್ಯಾಮೆರಾದಲ್ಲಿ ಬರೋಬ್ಬರಿ 4 ಹುಲಿಗಳು ಪತ್ತೆ ! | Nanjangud Tiger Attack

ಹಾಗಾಗಿ, ನಿರ್ಜೀವ ವಸ್ತುವಿಗೆ ಬೈಯೋದು ಯಾವುದೇ ಹುಚ್ಚುತನವಲ್ಲ; ಬದಲಿಗೆ ತೀವ್ರ ನೋವು ಮತ್ತು ಆಘಾತದಿಂದ ಹೊರಬರಲು ನಮ್ಮ ಮೆದುಳು ಆಡುವ ಒಂದು ಸ್ವಾಭಾವಿಕ ಆಟ ಅಷ್ಟೇ.