

Drunk: ನಮ್ಮ ದೇಶದಲ್ಲಿ ಕುಡಿಯುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಸಂಬಳ ಆದಾಗ, ಜನ್ಮದಿನದ ಪಾರ್ಟಿ, ಔತಣಕೂಟ, ಹೊಸ ವಾಹನ ಖರೀದಿ, ಲವ್ ಫೇಲ್ಯೂರ್ ಹೀಗೆ ಯಾವುದಾದರೂ ಒಂದು ಕಾರಣವನ್ನು ನೆಪವೊಡ್ಡಿ ಕುಡಿತಕ್ಕೆ ಕೂರುವವರು ಹೆಚ್ಚು ಮಂದಿ. ಅದರಲ್ಲೂ ಮನಸ್ಸಿನಲ್ಲಿ ನೋವನ್ನು ತುಂಬಿಕೊಂಡಿರುವ ಕೆಲವರು, ಕಂಠಪೂರ್ತಿ ಕುಡಿದಾಗ ತಮ್ಮ ಸ್ನೇಹಿತರ ಬಳಿ ಇಂಗ್ಲಿಷ್ನಲ್ಲಿ ಡೈಲಾಗ್ ಹೊಡೆಯುವುದೇನು? ಮಾತಿನ ಭರಾಟೆ ಜೋರಾಗಿಸುವುದೇನು? ಫುಲ್ ಕಾನ್ಫಿಡೆನ್ಸ್ನಲ್ಲಿ ಮಾತಿಗಿಳಿಯುತ್ತಾರೆ. ಕುಡಿಯುವ ಮೊದಲು ಹೆದರುವವರು, ಅದ್ಹೇಗೆ ಕುಡಿದ ಮತ್ತಿನಲ್ಲಿ ಅಷ್ಟು ಧೈರ್ಯದಿಂದ ಮಾತಾಡ್ತಾರೆ ಎಂಬ ಕುತೂಹಲಕಾರಿ ಪ್ರಶ್ನೆಗೆ ಇಲ್ಲೊಂದು ವರದಿ ಉತ್ತರಿಸಿದೆ.
ಮದ್ಯದ ಬಾಟಲಿಯ ಮೇಲೆ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಎಂಬ ಸೂಚನೆ ಮದ್ಯವ್ಯಸನಿಗಳಿಗೆ ಎಚ್ಚರಿಕೆ ಘಂಟೆಯಾಗಿರುತ್ತದೆ. ಅಷ್ಟಾದರೂ ಕುಡಿಯುವುದರಿಂದ ಒಂದು ಹೆಜ್ಜೆ ಹಿಂದೆ ಹಾಕುವುದಿಲ್ಲ. ಅಸಲಿಗೆ ಅನೇಕ ಅಧ್ಯಯನಗಳು ಮದ್ಯ ಎಷ್ಟು ಹಾನಿಕಾರಕ ಎಂಬುದನ್ನು ಈಗಾಗಲೇ ಬಹಿರಂಗಪಡಿಸಿವೆ. ಕುಡಿತದಿಂದ ಲಿವರ್ ಡ್ಯಾಮೇಜ್ ಮತ್ತು ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದಾಗ್ಯೂ, ಕೆಲವರು ಕುಡಿತಕ್ಕೆ ದಾಸರಾಗಿದ್ದಾರೆ.
ಕಂಠಪೂರ್ತಿ ಕುಡಿದ ಸ್ನೇಹಿತ ಅಥವಾ ವ್ಯಕ್ತಿ, ಆರಂಭದಲ್ಲಿ ಮಾತೃಭಾಷೆಯಲ್ಲಿ ಮಾತನಾಡಿ, ನಂತರ ಏಕಾಏಕಿ ಇಂಗ್ಲಿಷ್ನಲ್ಲಿ ಮಾತನಾಡುವುದನ್ನು ಗಮನಿಸಿದ್ದೀರಾ? ಅಷ್ಟೋ-ಇಷ್ಟೋ ಆಂಗ್ಲ ಭಾಷೆ ಗೊತ್ತಿರುವ ಇವರು, ಸಾಮಾನ್ಯವಾಗಿ ಎಲ್ಲರ ಎದುರು ಧೈರ್ಯದಿಂದ ಮಾತನಾಡಲು ಹಿಂಜರಿಯುತ್ತಾರೆ. ಕಾರಣ, ಎಲ್ಲಿ ತಪ್ಪಾಗಿ ಮಾತಾಡಿ, ಇತರರ ಮುಂದೆ ನಗೆಪಾಟಲಿಗೆ ಸಿಲುಕುತ್ತೇನೆ ಎಂಬ ಅಂಜಿಕೆ ಅವರನ್ನು ಕಾಡುತ್ತಿರುತ್ತದೆ. ಅಷ್ಟಕ್ಕೂ ಕುಡಿದಾಗ ಹೀಗೆ ಧೈರ್ಯದಿಂದ ಮಾತನಾಡುವುದು ಯಾಕೆ? ಎಂಬುದಕ್ಕೆ ಹೀಗಿದೆ ನೋಡಿ ಉತ್ತರ.
'ಜರ್ನಲ್ ಆಫ್ ಸೈಕೋಫಾರ್ಮಕಾಲಜಿ' ಎಂಬ ವೈಜ್ಞಾನಿಕ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮದ್ಯಪಾನ ಮಾಡಿದ ನಂತರ ಬರುವ ಅಮಲು ಬೇರೆ ಭಾಷೆಯನ್ನು ಮಾತನಾಡಲು ಸಹಾಯ ಮಾಡುತ್ತದೆ. ಲಿವರ್ಪೂಲ್ ವಿಶ್ವವಿದ್ಯಾಲಯ, ಬ್ರಿಟನ್ನ ಕಿಂಗ್ಸ್ ಕಾಲೇಜು ಮತ್ತು ನೆದರ್ಲ್ಯಾಂಡ್ಸ್ನ ಮಾಸ್ಟ್ರಿಚ್ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗೆ ಡಚ್ ಭಾಷೆಯನ್ನು ಕಲಿಯುತ್ತಿದ್ದ ಮತ್ತು ಡಚ್ ಮಾತನಾಡುವ ನೆದರ್ಲ್ಯಾಂಡ್ಸ್ನಲ್ಲಿ ಅಧ್ಯಯನ ಮಾಡುತ್ತಿದ್ದ 50 ಜರ್ಮನ್ನರ ಗುಂಪನ್ನು ನೇಮಿಸಿಕೊಂಡು, ಉತ್ತರ ಹುಡುಕಿದೆ.
ಕುಡಿದ ಬಳಿಕ ನಮ್ಮ ನಡವಳಿಕೆ ನಮ್ಮ ಅರಿವಿಗೆ ಬಾರದಂತೆ ಬದಲಾಗುತ್ತದೆ. ಅದರ ಒಂದು ಭಾಗ ಭಾಷೆಯಲ್ಲಿನ ಬದಲಾವಣೆ. ಅತಿಯಾಗಿ ಕುಡಿಯುವವರು ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಮದ್ಯದ ಅಮಲಿನಲ್ಲಿರುವ ಈ ಜನರು ತಮ್ಮ ಅಭಿಪ್ರಾಯವನ್ನು ಇತರರ ಮುಂದೆ ಪೂರ್ಣ ಆತ್ಮವಿಶ್ವಾಸದಿಂದ ಬಿಚ್ಚಿಡುತ್ತಾರೆ. ಹೊಸ ಭಾಷೆಯನ್ನು ಕಲಿಯಲು ಹೆದರುವವರಿಗೆ, ಕುಡಿತವು ಆ ಹೊಸ ಭಾಷೆಯನ್ನು ಮಾತನಾಡಲು ಮತ್ತು ಕಲಿಯಲು ದೂಡುತ್ತದೆ. ಸಾಮಾನ್ಯವಾಗಿ, ಇಂಗ್ಲಿಷ್ ಮೇಲೆ ಕಡಿಮೆ ಹಿಡಿತ ಹೊಂದಿರುವ ಮಂದಿ, ಇನ್ನೊಬ್ಬರ ಮುಂದೆ ಇಂಗ್ಲಿಷ್ನಲ್ಲಿ ಮಾತನಾಡಲು ಹೆದರುತ್ತಾರೆ.
ಆದರೆ ಮದ್ಯ ಸೇವಿಸಿದ ನಂತರ, ಅದೇ ಜನರು ಇಂಗ್ಲಿಷ್ ಅನ್ನು ನಿರರ್ಗಳವಾಗಿ ಮಾತನಾಡಲು ಪ್ರಾರಂಭಿಸುವುದು ನಿಜಕ್ಕೂ ಅಚ್ಚರಿಯೇ. ಅದು ಸರಿಯೋ ಇಲ್ಲವೋ, ಯಾವುದೇ ಭಯವಿಲ್ಲದೆ ಮಾತನಾಡುತ್ತಾರೆ. ಮದ್ಯ ಸೇವಿಸಿದ ಬಳಿಕ ಆತಂಕ, ಮುಜುಗರ ಇವೆಲ್ಲವೂ ತಾತ್ಕಾಲಿಕವಾಗಿ ಕಣ್ಮರೆಯಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ,(ಏಜೆನ್ಸೀಸ್).