ಪೂಜೆ ವೇಳೆ ವಾಹನಗಳ ಚಕ್ರಕ್ಕೆ ನಿಂಬೆ ಹಣ್ಣು ಇಡಲು ಕಾರಣವೇನು? ಇಲ್ಲಿದೆ ನೋಡಿ ಅಚ್ಚರಿಯ ಉತ್ತರ! Lemons with Vehicles

Lemons with Vehicles
Published on

Lemons with Vehicles : ಹಿರಿಯರು ಹೇಳುವ ಪ್ರತಿಯೊಂದು ಸಣ್ಣ ವಿಷಯದ ಹಿಂದೆ ಅರ್ಥವಿರಲಿ ಅಥವಾ ಇಲ್ಲದಿರಲಿ, ಅದನ್ನು ಒಂದು ಸಂಪ್ರದಾಯವೆಂದು ಪರಿಗಣಿಸಲಾಗುತ್ತದೆ ಮತ್ತು ಎಲ್ಲರೂ ಅದನ್ನು ಅನುಸರಿಸುತ್ತಾರೆ. ಆ ಸಂಪ್ರದಾಯದಲ್ಲಿ ಪೂಜೆ ಮಾಡುವಾಗ ವಾಹನಗಳ ಚಕ್ರಕ್ಕೆ ನಿಂಬೆಹಣ್ಣುಗಳನ್ನು ಇಡುವುದು ಕೂಡ ಒಂದು.

ಸಾಮಾನ್ಯವಾಗಿ ಯಾವುದೇ ಹೊಸ ವಾಹನಗಳನ್ನು ಖರೀದಿಸಿದಾಗ, ಅದಕ್ಕೆ ಪೂಜೆಯನ್ನು ಮಾಡಿಸಲಾಗುತ್ತದೆ. ಯಾವುದೇ ಅಪಾಯ ಬಾರದಿರಲಿ ಅಂತಾ ಹಿಂದು ನಂಬಿಕೆಯ ಪ್ರಕಾರ ಪೂಜೆ ನೆರವೇರಿಸಲಾಗುತ್ತದೆ. ಯಾವುದಾದರೂ ಒಂದು ದೇವಸ್ಥಾನಕ್ಕೆ ವಾಹನವನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಸುವಾಗ ಚಕ್ರಗಳ ಕೆಳಗೆ ನಿಂಬೆಹಣ್ಣುಗಳನ್ನು ಇಟ್ಟು ಅದರ ಮೇಲೆ ವಾಹನ ಚಲಾಯಿಸುತ್ತಾರೆ. ಈ ವೇಳೆ ನಿಂಬೆಹಣ್ಣು ಅಪ್ಪಚ್ಚಿಯಾದರೆ ಶುಭ ಸಂಕೇತ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ವಾಹನ ಚಾಲನೆ ಮಾಡುವಾಗ ಯಾವುದೇ ಅಪಘಾತ ಸಂಭವಿಸುವುದಿಲ್ಲ ಎಂದು ಹಿಂದೂಗಳು ಬಲವಾಗಿ ನಂಬುತ್ತಾರೆ.

ಈ ರೀತಿ ವಾಹನಗಳನ್ನು ಪೂಜಿಸುವುದರಿಂದ ಹೆಚ್ಚಿನ ಲಾಭವಾಗುತ್ತದೆ ಎಂದು ನಂಬಲಾಗಿದೆ. ಹೊಸ ವಾಹನಗಳನ್ನು ಮಾತ್ರವಲ್ಲದೆ, ಕೆಲವು ಹಬ್ಬಗಳಲ್ಲಿ ಹಳೆ ವಾಹನಗಳನ್ನು ತೊಳೆದು, ನಿಂಬೆ ಹಣ್ಣು ಇಟ್ಟು ಪೂಜೆ ಮಾಡುತ್ತಾರೆ. ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಈ ಪೂಜಾ ವಿಧಾನದ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಅದೇನೆಂದರೆ, ಕುದುರೆ ಬಂಡಿಗಳು ಮತ್ತು ಎತ್ತಿನ ಬಂಡಿಗಳನ್ನು ಸಾರಿಗೆಗಾಗಿ ಬಳಸುತ್ತಿದ್ದ ಕಾಲದಲ್ಲಿ, ಜನರು ಬಹಳ ದೂರ ಪ್ರಯಾಣಿಸುತ್ತಿದ್ದರು. ಆ ಸಮಯದಲ್ಲಿ, ಅವರು ಮಣ್ಣು ಮತ್ತು ನೀರಿನ ಮೂಲಕ ಪ್ರಯಾಣಿಸಬೇಕಾಗಿತ್ತು. ಇದು ಕುದುರೆಗಳು ಮತ್ತು ಎತ್ತುಗಳ ಕಾಲುಗಳಲ್ಲಿ ಕೆಲವು ರೀತಿಯ ಸೋಂಕುಗಳಿಗೆ ಕಾರಣವಾಗುತ್ತಿತ್ತು.

ಕೆಸರು ಮತ್ತು ಮಣ್ಣಿನಲ್ಲಿರುವ ಕೊಳಕು ಮತ್ತು ಸೂಕ್ಷ್ಮಜೀವಿಗಳು ಕುದುರೆಗಳು ಮತ್ತು ಎತ್ತುಗಳ ಪಾದಗಳನ್ನು ತಲುಪದಂತೆ ತಡೆಯಲು ನಿಂಬೆಹಣ್ಣುಗಳನ್ನು ಬಳಸಲಾಗುತ್ತಿತ್ತು. ಆದರೆ, ನಂತರದ ದಿನಗಳಲ್ಲಿ ಇದೇ ವಿಧಾನವನ್ನು ವಾಹನಗಳಿಗೆ ಬಳಸುವುದನ್ನು ಮುಂದುವರೆಸಲಾಯಿತು.

ನಿಂಬೆಹಣ್ಣಿನಲ್ಲಿರುವ ಅನೇಕ ಔಷಧೀಯ ಗುಣಗಳು ಕುದುರೆ ಮತ್ತು ಎತ್ತುಗಳ ಪಾದಗಳಿಗೆ ಸೋಂಕು ತಗುಲದಂತೆ ತಡೆಯುತ್ತದೆ ಎಂದು ನಂಬಲಾಗಿತ್ತು. ಇದು ಪ್ರಯಾಣವನ್ನು ಸುಲಭಗೊಳಿಸುತ್ತಿತ್ತು. ಅಂದು ಈ ರೀತಿಯಾಗಿ ಅನುಸರಿಸುತ್ತಿದ್ದ ವಿಧಾನವನ್ನು ಇಂದಿಗೂ ಹಿಂದೂಗಳು ಅನುಸರಿಸುತ್ತಿದ್ದಾರೆ. ಆದರೆ, ಕುದುರೆಗಳು ಮತ್ತು ಎತ್ತುಗಳ ಬದಲು ಜೀವ ಇಲ್ಲದ ವಾಹನಗಳು ಬಂದಿವೆ. ವಾಹನಗಳ ರಬ್ಬರ್ ಟೈರ್‌ಗಳಿಗೂ ಈ ರೀತಿಯ ನಂಬಿಕೆಯನ್ನು ಆಚರಿಸಲಾಗುತ್ತದೆ. ಆದಾಗ್ಯೂ, ಇದನ್ನು ಮಾಡುವುದು ಒಂದು ಸಂಪ್ರದಾಯವಾಗಿದೆ. ಇದನ್ನು ಅನುಸರಿಸುವುದರಿಂದ ತಮಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹಿಂದೂಗಳು ನಂಬುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net