

ತಿರುವನಂತಪುರಂ: ಕೇರಳ ವಿಧಾನಸಭೆಯು ರಾಜ್ಯದ ಹೆಸರನ್ನು "ಕೇರಳಂ" ಎಂದು ಬದಲಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು. ಈ ನಿರ್ಣಯವನ್ನು ಸಿಎಂ ಪಿಣರಾಯಿ ವಿಜಯನ್ ಮಂಡಿಸಿದ್ದು ಎಲ್ಲ ಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿವೆ. ಮತ್ತು ಎಲ್ಲ ಭಾಷೆಗಳಲ್ಲಿ ರಾಜ್ಯದ ಅಧಿಕೃತ ಹೆಸರನ್ನು ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು.
ರಾಜ್ಯದ ಹೆಸರು ಬದಲಾವಣೆಯ ನಿಜವಾದ ಉದ್ದೇಶವೆನೆಂದರೆ ಕೇರಳೀಯರು ತಮ್ಮ ಮಾತೃಭಾಷೆಯಾದ ಮಲಯಾಳಂನಲ್ಲಿ ರಾಜ್ಯದ ಹೆಸರನ್ನು ಕೇಳುವುದು ಮತ್ತು ಕರೆಯುವುದಾಗಿದೆ. ಭಾಷಾ ಒಗ್ಗಟ್ಟು ಕೇರಳಿಗರ ಇಚ್ಛೆಯಾಗಿದೆ ಎಂದು ವಿಧಾನಸಭೆಯಲ್ಲಿ ನಿರ್ಣಯ ಮಂಡನೆ ಸಂದರ್ಭದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದರು.
ಕಳೆದ ವರ್ಷವೂ ಕೇರಳದ ಹೆಸರನ್ನು ಕೇರಳಂ ಎಂದು ಬದಲಾಯಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಸರ್ವಾನುಮತದ ನಿರ್ಣಯವನ್ನು ಕಳುಹಿಸಿತು. ಆದರೆ, ಈ ಪ್ರಸ್ತಾವನೆಯನ್ನು ಕೇಂದ್ರ ಒಪ್ಪಿರಲಿಲ್ಲ. ರಾಜ್ಯದ ಹೆಸರಿನ ಯಾವುದೇ ಬದಲಾವಣೆಗೆ ಕೇಂದ್ರದ ಸಾಂವಿಧಾನಿಕ ಅನುಮೋದನೆಯ ಅಗತ್ಯವಿದೆ. ಸಂವಿಧಾನದಲ್ಲಿಯೇ ಹೆಸರು ಬದಲಾಯಿಸಬೇಕು. ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ವಿಚಾರವಾಗಿದೆ. ಹಿಂದಿನ ನಿರ್ಣಯದ ಪ್ರಕಾರ ಸಂವಿಧಾನದ ಮೊದಲ ಮತ್ತು ಎಂಟನೇ ಶೆಡ್ಯೂಲ್‌ನಲ್ಲಿ ಹೆಸರು ಬದಲಾಯಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಮೊದಲ ಶೆಡ್ಯೂಲ್ ನಲ್ಲಿಯೇ ಬದಲಾವಣೆ ಮಾಡಬೇಕಿದೆ ಎಂದು ಕೇಂದ್ರ ಸೂಚಿಸಿದೆ ಎಂದು ವರದಿಯಾಗಿದೆ.
ಮಲಯಾಳಂನಲ್ಲಿ ನಮ್ಮ ರಾಜ್ಯದ ಹೆಸರು ಕೇರಳಂ. ಆದರೆ, ಸಂವಿಧಾನದ ಮೊದಲ ಶೆಡ್ಯೂಲ್‌ನಲ್ಲಿ ನಮ್ಮ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಗಿದೆ. ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸಲು ಸಂವಿಧಾನದ 3ನೇ ಪರಿಚ್ಛೇದದ ಅಡಿಯಲ್ಲಿ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಈ ಬಾರಿ ನಿರ್ಣಯದ ಬಳಿಕ ಮನವಿ ಮಾಡಿದರು. ಇದಕ್ಕೆ ವಿಧಾನಸಭೆಯು ಸರ್ವಾನುಮತದಿಂದ ಅದನ್ನು ಬೆಂಬಲಿಸಿತು.
ಕೇರಳಂ ಹೆಸರಿನ ಇತಿಹಾಸ: ಮಲಯಾಳಂ ಮಾತನಾಡುವವರಿಗೆ ಭಾಷಾವಾರು ಆಧಾರದ ಮೇಲೆ ಪ್ರತ್ಯೇಕ ರಾಜ್ಯಕ್ಕಾಗಿ 1920ರ ದಶಕದಲ್ಲಿ ಐಕ್ಯ ಕೇರಳ ಚಳವಳಿಯು ಕರೆ ನೀಡಿತು. 1956ರಲ್ಲಿ ಮಲಯಾಳಂ ಭಾಷಿಕರಿಗಾಗಿ ಒಂದು ರಾಜ್ಯವನ್ನು ಅಂತಿಮವಾಗಿ ರಚಿಸಲಾಯಿತು. ಅದರ ಭಾಷೆಯಲ್ಲಿ ರಾಜ್ಯದ ಮೂಲ ಹೆಸರು ಕೇರಳಂ. ಇದನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಕೇರಳ ಎಂದು ಬದಲಾಯಿಸಲಾಯಿತು.
'ಕೇರಳಂ' ಪದದ ಇತಿಹಾಸವು ಅನೇಕ ಸಿದ್ಧಾಂತಗಳೊಂದಿಗೆ ಸಂಬಂಧ ಹೊಂದಿದೆ. ಕೆಲವು ಜನರು ಇದನ್ನು 'ಚೇರ' ರಾಜವಂಶಕ್ಕೆ ಸಂಬಂಧಿಸಿದೆ ಎಂದು ಪರಿಗಣಿಸುತ್ತಾರೆ. ಇನ್ನು PS ಸಚಿನ್‌ದೇವ್ ಅವರ ಇಕೋಕ್ರಿಟಿಕಲ್ ಎಕ್ಸ್‌ಪ್ಲೋರೇಷನ್ಸ್ ಪುಸ್ತಕದ ಪ್ರಕಾರ ಈ ಪದವು 'ಚೇರ-ಆಲಂ'(ಚೇರರ ಭೂಮಿ)ನಿಂದ ಕೇರಾ-ಆಲಂ' ಎಂದು ಬದಲಾಯಿತು. ಈ ಪದದ ಅರ್ಥವು ತೆಂಗಿನಕಾಯಿಗಳ ನಾಡು - 'ಕೇರಾ-ಆಲಂ' ಆಗಿರಬಹುದು ಎಂದು ತಿಳಿಸುತ್ತದೆ. ಅಲ್ಲಿ ಕೆರಾ ಎಂಬುದು ತೆಂಗಿನಕಾಯಿಗೆ ಸ್ಥಳೀಯ ಪದವಾಗಿದೆ.(ಏಜೆನ್ಸೀಸ್)