ನಾನು ಭಯ ಪಡೋಕೆ ಸಿಎಂ ಏನಾದರೂ ದೆವ್ವವೆ?

HD Kumaraswamy
Published on

ಬೆಂಗಳೂರು: ನಾನು ಯಾರಿಗೂ ಭಯಪಡುವುದಿಲ್ಲ. ನಾನು ಭಯ ಪಡೋಕೆ ಸಿಎಂ ಏನಾದರೂ ದೆವ್ವವೆ? ಅವರಿಗೇಕೆ ನಾನು ಯಾಕೆ ಭಯಪಡಲಿ. ಅಷ್ಟಕ್ಕೂ ನಾನು ದೆವ್ವಕ್ಕೂ ಹೆದರಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಜೆ.ಪಿ. ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ಹೆದರಿಸೋಕೆ ಯಾರಿಂದಲೂ ಆಗಲ್ಲ. ನಾನು ಯಾರಿಗೂ ಹೆದರಲ್ಲ. ಹೆದರೋದು ದೇವರಿಗೆ ಮತ್ತು ನಾಡಿನ ಜನರಿಗಷ್ಟೆ. ಸಿದ್ದರಾಮಯ್ಯ ಅಂತಹವರು ಲಕ್ಷ ಜನ ಬರಲಿ ನಾನು ಹೆದರಲ್ಲ. ಹೆದರೋದು ನನ್ನನ್ನು ಬೆಳೆಸಿರುವ ನಾಡಿನ ಜನಕ್ಕೆ. ಇಂತಹ ಸಿದ್ದರಾಮಯ್ಯಗೆ ನಾನು ಹೆದರುತ್ತೀನಾ? ಎಂದು ಟಾಂಗ್ ಕೊಟ್ಟರು.

ನಾನು ರಾಜಕೀಯದಲ್ಲಿ ಸಿದ್ದರಾಮಯ್ಯ ನೆರಳಲ್ಲಿ ಬಂದಿದ್ದೀನಾ? ಸ್ವತಃ ದುಡಿಮೆ, ಕಾರ್ಯಕರ್ತರು, ಜನರ ಆಶೀರ್ವಾದದಿಂದ ಮೇಲೆ ಬಂದಿದ್ದೇನೆ. ಸಿದ್ದರಾಮಯ್ಯ ಹೆಸರಲ್ಲಿ ನಾನು ರಾಜಕೀಯ ಮಾಡಿಲ್ಲ. ಹಾಗೆ ನೋಡಿದರೆ ಸಿಎಂ ಸಿದ್ದರಾಮಯ್ಯನವರು ನನ್ನ ಪಕ್ಷದ ಕಾರ್ಯಕರ್ತರು ಮತ್ತು ದೇವೇಗೌಡರ ನೆರಳಿನಲ್ಲಿ ಬಂದವರು. ನನ್ನನ್ನು ಹೆದರಿಸುವುದಕ್ಕೆ ಆಗುತ್ತಾ? ಎಂದು ಕಿಡಿಕಾರಿದರು

ಅದು ಯಾವುದೋ ಕೇಸ್ ಹಾಕಿಕೊಂಡು ನನ್ನ ಹೆದರಿಸೋಕೆ ಆಗುತ್ತಾ? ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಗೆ ಬಂಧನದ ಭೀತಿ ಹೇಳುತ್ತಿದ್ದಾರೆ. ನನಗೆ ಅಂತಹ ಯಾವುದೇ ಭೀತಿಯೋ ಇಲ್ಲ ಎಂದರು.

ಕಾಲವೇ ಉತ್ತರ ಕೊಡುತ್ತದೆ:

ಎ್ಐಆರ್ ಮಾಡಿ ಬೆದರಿಸುವ ತಂತ್ರವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆದರಿಕೆ ಅಲ್ಲದೆ ಇನ್ನೇನು? ಏನಿದೆ ಎ್ಐಆರ್‌ನಲ್ಲಿ?. ಅದರ ಬಗ್ಗೆ ನಾನು ಚರ್ಚೆ ಮಾಡೋದು ಅನಾವಶ್ಯಕ. ಕಾಲವೇ ನಿರ್ಧಾರ ಮಾಡುತ್ತದೆ. ಕಾಲ ಕಾಲಕ್ಕೆ ಪ್ರತಿಯೊಂದಕ್ಕೂ ಉತ್ತರ ನೀಡುತ್ತದೆ ಎಂದು ಕಿಡಿಕಾರಿದರು.

ಭಂಡ ಸರ್ಕಾರ ಇದು

ಮುಡಾ ವಿಚಾರ ಡೈವರ್ಟ್ ಮಾಡಲು ಎ್ಐಆರ್ ಹಾಕಲಾಗಿದೀಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆಸಿದ ಅವರು, ಪ್ರತಿಯೊಂದು ಡೈವರ್ಟ್ ಮಾಡುತ್ತಿದ್ದಾರೆ. ಈ ಸರ್ಕಾರ ಎಲ್ಲವನ್ನೂ ಬಿಟ್ಟಿರುವ ಸರ್ಕಾರ. ಯಾವ ಭಯ ಭಕ್ತಿಯೂ ಇಲ್ಲ, ಗೌರವವೂ ಇಲ್ಲ. ಭಂಡ ಸರ್ಕಾರ ಇದು. ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವುದು ಅರ್ಥ ಇಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net