

ಬಾಗಲಕೋಟೆ: ಕೋವಿಡ್ ರಣಕೇಕೆಯ ನಡುವೆಯೂ ನಿಯಮ ಉಲ್ಲಂಘಿಸಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದ ನವವಿವಾಹಿತನಿಗೆ ಕಾನೂನು ಸಂಕಷ್ಟ ಎದುರಾಗಿದೆ. ಇನ್ನು ಈ ಮದುವೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಸಂಬಂಧಿಕರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ತಾಲೂಕಿನ ಕಲಾದಗಿಯಲ್ಲಿ ಕರೊನಾ ರಣಕೇಕೆ ಹಾಕುತ್ತಿದೆ. ಇದಕ್ಕೆಲ್ಲ ಕಾರಣ ಬಾಗಲಕೋಟೆಯಲ್ಲಿ ಜೂ.12ರಂದು ನೆರವೇರಿದ್ದ ಹಾವೇರಿ ಜಿಲ್ಲೆಯ ಅಬಕಾರಿ ಇನ್ಪೆಕ್ಟರ್ವೊಬ್ಬರ ಮದುವೆ ಸಮಾರಂಭ. ಈ ಮದುವೆಯಲ್ಲಿ ಕರೊನಾ ನಿಯಮಾವಳಿಯನ್ನು ಉಲ್ಲಂಘಿಸಲಾಗಿತ್ತು. ವರ ಕಲಾದಗಿ ಗ್ರಾಮದ ನಿವಾಸಿ ಆಗಿದ್ದರಿಂದ ವಿವಾಹ ಸಮಾರಂಭದಲ್ಲಿ ಈ ಊರಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮದುವೆ ನಂತರ ವರನಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಇದೀಗ ಮದುವೆಯಲ್ಲಿ ಪಾಲ್ಗೊಂಡ ಅನೇಕರಿಗೆ ಸೋಂಕು ಪತ್ತೆ ಆಗುತ್ತಲೇ ಇದೆ. ಈಗಾಗಲೇ 20ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಇದನ್ನೂ ಓದಿರಿ ಇಡೀ ರಾಜ್ಯ ಮತ್ತೆ ಸ್ತಬ್ಧ! ವೀಕೆಂಡ್ ಲಾಕ್ಡೌನ್ಗೆ ಕ್ಷಣಗಣನೆ
ಮದುವೆ ಬಗ್ಗೆ, ಎಷ್ಟು ಜನರು ಭಾಗವಹಿಸಬೇಕು ಎನ್ನುವ ಬಗ್ಗೆ ನಿಯಮ ಉಲ್ಲಂಘನೆ ಆರೋಪದಡಿ ನವವಿವಾಹಿತ ಮತ್ತು ಕುಟುಂಬದ ಇತರರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವರನ ವಿರುದ್ಧ ಕೇಸ್ ದಾಖಲಾಗಿರುವ ಬಗ್ಗೆ ಎಸ್ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.
ನವವಿವಾಹಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದಲೇ 20ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಮದುವೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಕರೊನಾ ಭೀತಿಯ ಛಾಯೆ ಆವರಿಸಿದೆ.