

ಬೆಂಗಳೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.
ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹೆಣೆದ ರಣತಂತ್ರಕ್ಕೆ ಬಿಜೆಪಿ ಪಾಳಯ ಛಿದ್ರವಾಗಿದ್ದು ಹಿಂದಿನ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದವರು ಸಹ ಹೀನಾಯ ಸೋಲನ್ನು ಅನುಭವಿಸಿದ್ದಾರೆ.
ಇನ್ನು ಆಡಳಿತ ಪಕ್ಷಗಳ ವೈಫಲ್ಯವನ್ನೇ ಪ್ರಮುಖ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ ಬಿಜೆಪಿ ವಿರುದ್ಧ ಸರಣಿ ಆರೋಪಗಳು ಹಾಗೂ ಹಗರಣಗಳನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಯಿತ್ತು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಚುನಾವಣಾ ತಂತ್ರಗಾರಿಕೆಯೂ ಸಹ ಫಲ ನೀಡಿದ್ದು ಇದರ ಕ್ರೆಡಿಟ್ ಬಳ್ಳಾರಿ ಮೂಲದ ಸುನೀಲ್ ಕನುಗೋಲು ಅವರಿಗೆ ಸಲ್ಲುತ್ತದೆ.
2018ರ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಪರ ಚುನಾವಣಾ ತಂತ್ರಗಾರರಾಗಿ ಕೆಲಸ ಮಾಡಿದ್ದ ಸುನೀಲ್ ಕನುಗೋಲು ಪ್ರಶಾಂತ್ ಕಿಶೋರ್ ತಂಡದಲ್ಲಿ ಇದ್ದರೂ ಎನ್ನುವುದು ವಿಶೇಷ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ಗೆ ಹತ್ತಿರವಾಗಿದ್ದ ಸುನೀಲ್ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.
ಚುನಾವಣಾ ತಂತ್ರಗಾರ ಸುನೀಲ್ ಕನುಗೋಲು ಅವರ ತಂಡ ಕಾಂಗ್ರೆಸ್ ಪಕ್ಷದ ಕೆಲವು ನಾಯಕರನ್ನು ಹೊರತುಪಡಿಸಿ ಮಿಕ್ಕೆಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿ ಅದರ ವರದಿ ನೀಡಿತ್ತು.
ಕಳೆದ ವರ್ಷ ಕಾಂಗ್ರೆಸ್ ನಾಯಕರು ನಡೆಸಿದ್ದ ಚಿಂತನ ಶಿಬಿರದ ಬಳಿಕ ಸುನೀಲ್ ಅವರನ್ನು ಸೋನಿಯಾ ಗಾಂಧಿ ಮುಂಬರುವ ರಾಜ್ಯ ವಿಧಾನಸಬೆ ಚುನಾವಣೆಗಳು ಹಾಗೂ ಲೋಕಸಭೆ ಚುನಾವಣೆಗೆ ತಂತ್ರಗಾರರನ್ನಾಗಿ ನೇಮಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಸುನೀಲ್ ಕಣುಗೋಲು ಮತ್ತು ಅವರ ತಂಡ ವಿವಿಧ ಪಕ್ಷಗಳ ಪರ ಕೆಲಸ ಮಾಡಿ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ನಡೆದ ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಹಾಗೂ 2021ರಲ್ಲಿ ಡಿಎಂಕೆ ಪರ ತಂತ್ರಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರಶಾಂತ್ ಕಿಶೋರ್ ಜೊತೆ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಸುನೀಲ್ 2014ರಲ್ಲಿ ಬಿಜೆಪಿಯ ಪರ ಕೆಲಸ ಮಾಡಿದ್ದರು. ಬಿಜೆಪಿಯ ಬಿಲಿಯನ್ ಮೈಂಡ್ಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ಬಿಜೆಪಿ ಪರ ಕೆಲಸ ಮಾಡಿ ಪಕ್ಷ ಗೆಲುವಿನ ನಗೆ ಬೀರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕರ್ನಾಟಕದ ಬಳ್ಳಾರಿ ಮೂಲದವರಾದ ಸುನೀಲ್ ಬೆಳೆದಿದ್ದು ಚೆನ್ನೈನಲ್ಲಿ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಭಾರತ್ ಜೋಡೋ ಯಾತ್ರೆಯ ರೂಪುರೇಷೆಯನ್ನು ಸಿದ್ದಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನರೊಂದಿಗೆ ಸಂಪರ್ಕ ಸಾಧಿಸಲು ಯಾತ್ರೆ ಅನುಕೂಲ ಮಾಡಿದೆ ಮತ್ತು ಪಕ್ಷಕ್ಕೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಸಹಾಯ ಮಾಡಿದೆ.
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಸುನೀಲ್ ಕಣುಗೋಲು ಮುಂದೆ ಸಾಲು ಸಾಲು ಸವಾಲುಗಳು ನಿಂತಿದೆ. ಮುಂಬರುವ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಮಿಜೋರಾಂನಲ್ಲಿ ಪಕ್ಷವನ್ನು ಅಧಿಕಾರಿಕ್ಕೆ ತರುವ ಸವಾಲು ಇವರ ಮುಂದಿದೆ.
ಇದಲ್ಲದೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ವಿರೋಧ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುವ ಕೆಲಸ ಇವರ ಮುಂದಿದೆ.