

ನವದೆಹಲಿ: ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಓಲಿ ಅವರಿಗೆ ತಾವು ರಾಜೀನಾಮೆ ನೀಡುವುದು ಅನಿವಾರ್ಯ ಎಂಬುದು ಅರಿವಾಗುತ್ತಿದ್ದಂತೆ ತಮ್ಮ ಧ್ವನಿಯನ್ನೇ ಬದಲಿಸಿಕೊಂಡಿದ್ದಾರೆ. ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಕೆಳಗಿಳಿದ ಬಳಿಕ ಯಾರು ಈ ಹುದ್ದೆಗೆ ಏರುತ್ತಾರೆ ಎಂಬುದನ್ನು ತಿಳಿಸಿ... ಒಂದಂತೂ ನಿಜ... ಮುಂದಿನ ಪ್ರಧಾನಿ ಸಿಪಿಎನ್ (ಯೂನಿಫೈಡ್ ಮಾರ್ಕ್ಸ್ಸಿಸ್ಟ್-ಲೆನಿನಿಸ್ಟ್) ಆಗಿರಬೇಕು ಎಂಬ ಷರತ್ತನ್ನೂ ಹಾಕಿದ್ದಾರೆ.
ಓಲಿ ಅವರ ಈ ರಾಜಕೀಯ ದಾಳ ನೇಪಾಳ ಕಮ್ಯುನಿಸ್ಟ್ ಪಾರ್ಟಿಯನ್ನು ಕಂಗೆಡೆಸಿದೆ. ವಿವಿಧ ಕಮ್ಯುನಿಸ್ಟ್ ಬಣಗಳು ಒಂದಾಗಿ ನೇಪಾಳ ಕಮ್ಯುನಿಸ್ಟ್ ಪಾರ್ಟಿಯನ್ನು ರಚಿಸಲಾಗಿದೆ. ಓಲಿ ಅವರು ಮುಂದಿನ ಪ್ರಧಾನಿ ಸಿಪಿಎನ್ನಿಂದಲೇ ಆಗಬೇಕು ಎಂಬ ಷರತ್ತು ಹಾಕಿರುವುದನ್ನು ಗಮನಿಸಿದಾಗ ಒಂದಾಗಿರುವ ವಿವಿಧ ಕಮ್ಯುನಿಸ್ಟ್ ಬಣಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸುವ ಯತ್ನ ಇದು ಎಂದು ಹೇಳಲಾಗುತ್ತಿದೆ.
ಓಲಿ ಮತ್ತು ಪುಷ್ಪ ಕಮಲ್ ಧಹಾಲ್ ಪ್ರಚಂಡಾ ನಡುವೆ ಅಧಿಕಾರ ಹಂಚಿಕೆ ವಿಷಯದಲ್ಲಿ 50ಫಿಫ್ಟಿ ಒಪ್ಪಂದ ಏರ್ಪಟ್ಟಿತ್ತು. ಆದರೆ, 2019ರಲ್ಲಿ ಧಹಾಲ್ ಅವರ ಮನವೊಲಿಸಿದ ಓಲಿ ತಾವು ಪ್ರಧಾನಿಯಾಗಿ ದೇಶದ ಆಡಳಿತದಲ್ಲಿ ಮುಂದುವರಿಯುವುದು ಹಾಗೂ ಪ್ರಚಂಡಾ ಪಕ್ಷದ ಆಗುಹೋಗುಗಳ ಮೇಲ್ವಿಚಾರಣೆ ವಹಿಸಿಕೊಳ್ಳುವುದು ಎಂದು ಅಧಿಕಾರ ಹಂಚಿಕೊಂಡಿದ್ದರು. ಆದರೆ ಇತ್ತೀಚೆಗೆ ಪಕ್ಷದಲ್ಲಿ ಮೂರು ಶಕ್ತಿಕೇಂದ್ರಗಳಾಗಿರುವ ಧಹಾಲ್, ಜಹಾಲ್ ನಾಥ್ ಖನಾಲ್ ಮತ್ತು ಮಾಧವ್ ನೇಪಾಳ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಓಲಿ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.
ಇದೀಗ ಈ ಮೂರು ಶಕ್ತಿಕೇಂದ್ರಗಳ ನಡುವೆ ಅಪನಂಬಿಕೆ ಸೃಷ್ಟಿಸಿ, ಅವರನ್ನು ಒಡೆದು ಆಳುವ ನಿಟ್ಟಿನಲ್ಲಿ ಓಲಿ ತಮ್ಮ ರಾಜಕೀಯ ದಾಳ ಉರುಳಿಸಿದ್ದಾರೆ. ಧಹಾಲ್ ಪ್ರಧಾನಿ ಹುದ್ದೆ ಆಕಾಂಕ್ಷಿಯಾಗಿದ್ದಾರೆ. ಆದ್ದರಿಂದ, ಮುಂದಿನ ಪ್ರಧಾನಿ ಸಿಪಿಎನ್ನಿಂದಲೇ ಆಗಬೇಕು ಎಂಬ ಷರತ್ತು ವಿಧಿಸುವ ಮೂಲಕ ಧಹಾಲ್ ಮತ್ತು ಮಾಧವ್ ನೇಪಾಳ ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡುವುದು ಓಲಿ ಅವರ ಉದ್ದೇಶ. ಆದರೆ ಅವರ ಈ ರಾಜಕೀಯ ದಾಳ ಫಲಕಾರಿಯಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ನೇಪಾಳ ಕಾಂಗ್ರೆಸ್ ಪಾರ್ಟಿಯ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ.