

ಹೈದರಾಬಾದ್: ಕಲ್ಕಿ ಯಶಸ್ಸಿನಲ್ಲಿ ತೇಲುತ್ತಿರುವ ನಟ ಪ್ರಭಾಸ್ ಅವರ ಹೊಸ ಮೂವಿ ಇತ್ತೀಚಿಗೆ ಸೆಟ್ಟೇರಿದ್ದು, ಈ ಚಿತ್ರಕ್ಕೆ ಸೀತಾ ರಾಮಂ ಖ್ಯಾತಿಯ ಹನು ರಾಘವಪುಡಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. 1940ರ ಕಾಲಘಟ್ಟದಲ್ಲಿ ನಡೆಯಲಿರುವ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗುತ್ತಿದ್ದು, ಈ ಚಿತ್ರಕ್ಕೆ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಸಾಮಾನ್ಯವಾಗಿ ಪ್ರಭಾಸ್ ಸಿನಿಮಾ ಸೆಟ್ಟೇರುತ್ತಿದೆ ಎಂದರೆ ಬಾಲಿವುಡ್, ಟಾಲಿವುಡ್ನ ಸ್ಟಾರ್ ಹೀರೋಯಿನ್ಸ್ ಹೆಸರು ಮೊದಲಿಗೆ ಕೇಳಿ ಬರುತ್ತದೆ. ದೀಪಿಕಾ ಪಡುಕೋಣೆ, ಕೃತಿ ಸನೊನ್, ಶ್ರದ್ಧಾ ಕಪೂರ್, ದಿಶಾ ಪಟಾನಿ, ಪೂಜಾ ಹೆಗ್ಡೆ ಇದೇ ಮೊದಲ ಬಾರಿಗೆ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿಯನ್ನು ನಾಯಕಿಯನ್ನಾಗಿ ಹಾಕಿಕೊಳ್ಳಲಾಗಿದೆ. ಅಂದಹಾಗೆ ಯಾರು ಈ ಯುವತಿ? ಈಕೆಯನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂಬ ವಿಚಾರ ಎಲ್ಲರ ತಲೆಕೆಡಿಸುತ್ತಿದೆ.
ಹನು ರಾಘವಪುಡಿ, ಪ್ರಭಾಸ್ ಕಾಂಬಿನೇಷನ್ನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಚೆಲುವೆಯ ಹೆಸರು ಇಮಾನ್ ಇಸ್ಮಾಯಿಲ್ ಅಕಾ ಇಮಾನ್ವಿ ಎಂದು ತಿಳಿದು ಬಂದಿದೆ. ಇಮಾನ್ವಿ ಈ ವರೆಗೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಬಹಳ ಒಳ್ಳೆಯ ಡ್ಯಾನ್ಸರ್ ಆಗಿರುವ ಇಮಾನ್ವಿ, ಇನ್ಸ್ಟಾಗ್ರಾಂ, ಯೂಟ್ಯೂಬ್ಗಳಲ್ಲಿ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಪ್ರಭಾಸ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿರುವ ಇಮಾನ್ವಿ ಕ್ರೇಜ್ ಹೆಚ್ಚುತ್ತಿದ್ದು, ಫಾಲೋವರ್ಸ್ ಸಂಖ್ಯೆ ಏಕಕಾಲದಲ್ಲಿ ಡಬಲ್ ಆಗಿದೆ.
ಇಮಾನ್ವಿ, ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದ ‘ತಾಲ್’ ಸಿನಿಮಾದ ರಮ್ತಾ ಜೋಗಿ, ಎನಿಮಿ ಚಿತ್ರದ ತುಮ್ ತುಮ್ ಹಾಡಿಗೆ ಡ್ಯಾನ್ಸ್ ಮಾಡಿದ್ದ ಅವರ ವಿಡಿಯೋ ಬಹಳ ವೈರಲ್ ಆಗಿತ್ತು. ಸ್ವತಃ ಕೊರಿಯೋಗ್ರಾಫರ್ ಆಗಿರುವ ಇಮಾನ್ವಿ ಲಾಸ್ ಏಂಜಲ್ಸ್ನಲ್ಲಿ ಒಂದು ಡ್ಯಾನ್ಸ್ ಸ್ಕೂಲ್ ಹಾಗೂ ಟ್ರೂಪ್ಅನ್ನು ಹೊಂದಿದ್ದಾರೆ. ಭರತನಾಟ್ಯ, ಕುಚುಪುಡಿ ಸೇರಿದಂತೆ ಹಲವು ಮಾದರಿಯ ನೃತ್ಯ ಪ್ರಾಕಾರಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಇದಲ್ಲದೆ ಅವರು ವಿದೇಶಗಳಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಹನು ರಾಘವಪುಡಿ ನಿರ್ದೇಶನದ ಈ ಚಿತ್ರವು 1940ರ ಕಾಲಘಟ್ಟದಲ್ಲಿ ನಡೆಯುತ್ತದೆ ಎಂದು ಹೇಳಲಾಗಿದ್ದು, ಈ ಚಿತ್ರದಲ್ಲಿ ಇಮಾನ್ವಿ ನೃತ್ಯಗಾರ್ತಿ ಆಗಿರುತ್ತಾರೆ. ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡುವ ಮುನ್ನ ಹಲವು ಬಾರಿ ಸ್ಕ್ರೀನ್ ಟೆಸ್ಟ್ ಮಾಡಲಾಗಿದ್ದು, ಅಂತಿಮವಾಗಿ ಇಮಾನ್ವಿ ಅವರನ್ನು ನಿರ್ದೇಶಕರು ಓಕೆ ಮಾಡಿದ್ದಾರೆ.