ಉತ್ತರಕಾಶಿ ಸುರಂಗ ದುರಂತ: ರಕ್ಷಣಾ ಕಾರ್ಯಾಚರಣೆಯಲ್ಲಿ ಇವರದ್ದೇ ಪ್ರಮುಖ ಪಾತ್ರ! ಯಾರು ಈ ಅರ್ನಾಲ್ಡ್ ಡಿಕ್ಸ್?

kashi
Published on

ಉತ್ತರಕಾಶಿ: ಬಹುದಿನಗಳ ಕಾಯುವಿಕೆ, ಕಠಿಣ ಪರಿಶ್ರಮ, ತಾಳ್ಮೆ, ವೈಜ್ಞಾನಿಕ ಪ್ರಯತ್ನ ಹಾಗೂ ದೇವರ ಕೃಪೆಯಿಂದ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಗುತ್ತಿದೆ. ಕಳೆದ 17 ದಿನಗಳಿಂದ 41 ಕಾರ್ಮಿಕರು ಈ ಸುರಂಗದಲ್ಲಿ ಸಿಲುಕಿದ್ದರು. ಈ 17 ದಿನಗಳಲ್ಲಿ ಏನಾದರೂ ಅಹಿತಕರ ಘಟನೆ ನಡೆದು ಕಾರ್ಮಿಕರು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆದರೆ ಅವರನ್ನು ಸುರಕ್ಷಿತವಾಗಿ ಹೊರತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದ್ದು, ಅಂತಿಮವಾಗಿ 17 ದಿನಗಳ ನಂತರ ಅವರನ್ನು ಹೊರತೆಗೆಯಲಾಗುತ್ತಿದೆ.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಪಂಚದಾದ್ಯಂತದ ತಜ್ಞರು ಮತ್ತು ತಂತ್ರಜ್ಞಾನವನ್ನು ಬಳಸಲಾಗಿದೆ. ವಿದೇಶದಿಂದ ತಜ್ಞರು ಮತ್ತು ಯಂತ್ರಗಳನ್ನು ತರಲಾಯಿತು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸ್ಥಳೀಯ ಪೊಲೀಸರು, ಗ್ರಾಮಸ್ಥರು ಮತ್ತು ಸೇನಾ ಸಿಬ್ಬಂದಿಗಳ ಕಠಿಣ ಪರಿಶ್ರಮವು ಈ ಕಾರ್ಮಿಕರ ಜೀವವನ್ನು ಉಳಿಸಿದೆ. ಈ ಕಾರ್ಮಿಕರಿಗೆ ಹೊಸ ಬದುಕು ಸಿಕ್ಕಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ನ.20 ರಂದು ಅಪಘಾತ ಸ್ಥಳಕ್ಕೆ ಬಂದಿದ್ದ ಡಿಕ್ಸ್
ಇವರೆಲ್ಲರ ನಡುವೆ ಈ ಇಡೀ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಯೂ ಇದ್ದಾರೆ. ಅವರೇ ಇಂಟರ್‌ನ್ಯಾಶನಲ್ ಟನೆಲಿಂಗ್ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್ ಅಸೋಸಿಯೇಷನ್‌ನ ಅಧ್ಯಕ್ಷ ಅರ್ನಾಲ್ಡ್ ಡಿಕ್ಸ್. ಇವರು ನವೆಂಬರ್ 20 ರಂದು ಸುರಂಗದ ಸ್ಥಳಕ್ಕೆ ತಲುಪಿದರು. ಕಳೆದ 17 ದಿನಗಳಲ್ಲಿ ಪ್ರತಿಯೊಬ್ಬರೂ ಯಾವಾಗಲೂ ಪಾಸಿಟಿವ್ ಆಗಿರಲು ಸಲಹೆ ನೀಡಿದರು. ಡಿಕ್ಸ್ ಹಗಲು ರಾತ್ರಿ ಸುರಂಗದ ಸ್ಥಳದಲ್ಲಿ ಕೆಲಸಗಾರರೊಂದಿಗೆ ಸಂಪರ್ಕದಲ್ಲಿದ್ದರು. ಹಗಲು ರಾತ್ರಿ ಎನ್ನದೆ ಅವರು ಈ ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ಸದಾ ನಿರತರಾಗಿದ್ದರು.

ಡಿಕ್ಸ್ ಆಸ್ಟ್ರೇಲಿಯಾದಿಂದ ಬಂದವರು
ಪ್ರೊಫೆಸರ್ ಅರ್ನಾಲ್ಡ್ ಡಿಕ್ಸ್ ಅವರು ಆಸ್ಟ್ರೇಲಿಯಾದಿಂದ ಬಂದವರು. ಅಂಡರ್‌ಗ್ರೌಂಡ್ ಮತ್ತು ಸಾರಿಗೆ ಮೂಲಸೌಕರ್ಯದಲ್ಲಿ ಪರಿಣತರಾಗಿದ್ದಾರೆ. ಅವರು ಅಂಡರ್‌ಗ್ರೌಂಡ್ ನಿರ್ಮಾಣಕ್ಕೆ ಸಂಬಂಧಿಸಿದ ಅಪಾಯಗಳ ಬಗ್ಗೆ ಸಲಹೆ ನೀಡುವುದು ಮಾತ್ರವಲ್ಲದೆ, ಅಂಡರ್‌ಗ್ರೌಂಡ್ ಸುರಂಗ ಮಾರ್ಗದಲ್ಲಿ ವಿಶ್ವದ ಪ್ರಮುಖ ತಜ್ಞರಲ್ಲಿ ಒಬ್ಬರು. ಡಿಕ್ಸ್ ಬ್ರಿಟಿಷ್ ಇನ್‌ಸ್ಟಿಟ್ಯೂಟ್ ಆಫ್ ಇನ್ವೆಸ್ಟಿಗೇಟರ್ಸ್‌ನಲ್ಲಿ ಬ್ಯಾರಿಸ್ಟರ್ ಕೂಡ ಆಗಿದ್ದಾರೆ. 

ಮೂರು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಎಂಜಿನಿಯರಿಂಗ್, ಭೂವಿಜ್ಞಾನ, ಕಾನೂನು ಮತ್ತು ಅಪಾಯ ನಿರ್ವಹಣೆ ವಿಷಯಗಳಂತಹ ವಿಶಿಷ್ಟ ಮಿಶ್ರಣವನ್ನು ನೋಡಿದ್ದಾರೆ. ಅವರು ಎಲ್ಲಾ ಕಡೆ ಕೆಲಸ ಮಾಡಿದ್ದಾರೆ. ಡಿಕ್ಸ್ ಅಂಡರ್‌ಗ್ರೌಂಡ್ ವರ್ಕ್ಸ್ ಚೇಂಬರ್ಸ್, ವಿಕ್ಟೋರಿಯನ್ ಬಾರ್, ಬ್ರಿಟಿಷ್ ಇನ್‌ಸ್ಟಿಟ್ಯೂಟ್ ಆಫ್ ಇನ್ವೆಸ್ಟಿಗೇಟರ್ಸ್‌ನ ಸದಸ್ಯರಾಗಿದ್ದಾರೆ ಮತ್ತು ಟೋಕಿಯೊ ಸಿಟಿ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ (ಸುರಂಗಗಳು) ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net