

ಬೆಂಗಳೂರು: ಜಾತಿ ಜನಗಣತಿ ದಿನೇ ದಿನೆ ತರಹೇವಾರಿ ತಿರುವು ಪಡೆಯುತ್ತಿರುವಾಗಲೇ ಅತೀ ಹಿಂದುಳಿದ 2ಎ ಪ್ರವರ್ಗದಲ್ಲಿ ಸಿಂಹಪಾಲು ಬೆಣ್ಣೆ ನುಂಗಿದ ಭೂಪರು ಯಾರು(Who ate the largest portion of butter in category 2A?) ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಕಿರುಬೆರಳ ತುದಿಯಲ್ಲೇ ದತ್ತಾಂಶವಿದೆ. ನೀವು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಅಲ್ಲವೇ? ಈಗಲಾದರೂ ಸತ್ಯ ಹೇಳಿ ಸಿದ್ದರಾಮಯ್ಯನವರೇ.. ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ ಎಂದು ಕುಮಾರಸ್ವಾಮಿ ಕೆಣಕಿದ್ದಾರೆ.
ಜಾತಿ ಗಣತಿ ರಾಜಕೀಯ ಫಸಲಿಗೆ ಹೊಂಚು ಹಾಕಿರುವ ಸಿದ್ದರಾಮಯ್ಯನವರೇ ಸತ್ಯವನ್ನೇ ಹೇಳಿ. ನಿಮಗೂ ಗೊತ್ತು. 2ಅ ಪ್ರವರ್ಗದಲ್ಲಿ 101 ಜಾತಿಗಳಿವೆ, ಶೇ.15 ಮೀಸಲು ಪಾಲು ಇದೆ. ಈ ಪಾಲಿನಲ್ಲಿ ಅತಿಹೆಚ್ಚು ಪಾಲು ನುಂಗಿದವರು ಯಾರು ದೇವ್ರ..? ಈ ನುಂಗುವಿಕೆಯಲ್ಲಿಯೂ ನಿಮ್ಮ ಪಾತ್ರವೇನು ಸ್ವಾಮಿ? ಸತ್ಯ ಹೇಳಿ ಎಂದು ಕೇಳಿದ್ದಾರೆ.
15-20 ವರ್ಷಗಳಲ್ಲಿ ಅ ಆ ಇ ಈ ಗ್ರೂಪ್‌ಗಳಲ್ಲಿ ನಡೆದಿರುವ ನೇಮಕಾತಿ, ವೃತ್ತಿಪರ ಕೋರ್ಸ್ ಪ್ರವೇಶ, ಇನ್ನಿತರೆ ಎಲ್ಲ ಸೌಲಭ್ಯಗಳ ಅಂಕಿ-ಅಂಶ ಸುಳ್ಳು ಹೇಳುವುದಿಲ್ಲ, ಹೌದಲ್ಲವೇ? ವೃತ್ತಿಪರ ಕೋರ್ಸ್; ಅಂದರೆ ಮೆಡಿಕಲ್, ಡೆಂಟಲ್, ಎಂಜಿನಿಯರಿಂಗ್, ಡಿ ಫಾರ್ಮ, ಬಿ ಫಾರ್ಮ, ಕೃಷಿ ಇತ್ಯಾದಿ ವಿಭಾಗಗಳಲ್ಲಿ 2ಅ ಪ್ರವರ್ಗದ ನೂರೊಂದು ಜಾತಿಗಳಲ್ಲಿ ಯಾವ್ಯಾವ ಜಾತಿಯ ಎಷ್ಟೆಷ್ಟು ಮಕ್ಕಳಿಗೆ ಪ್ರವೇಶ ಸಿಕ್ಕಿದೆ. ಇಲ್ಲಿಯೂ ಸಿಂಹಪಾಲು ಪ್ರವೇಶ, ಲಾಭ ದಕ್ಕಿದ್ದು ಯಾರಿಗೆ? ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿ (ಸಿಇಟಿ) ಸಮಗ್ರ ದತ್ತಾಂಶ ಲಭ್ಯವಿದೆ, ತಾವು ತರಿಸಿ ನೋಡಬಹುದು ಎಂದು ಹೇಳಿದ್ದಾರೆ.
2ಅ ಪ್ರವರ್ಗದ ನೂರೊಂದು ಸಮಾಜಗಳ ಪೈಕಿ ಎಲ್ಲ ನೂರು ಸಮಾಜಗಳಲ್ಲಿ ನನ್ನ ಮನವಿ ಇಷ್ಟೇ; ಒಕ್ಕಲಿಗರು, ವೀರಶೈವ ಲಿಂಗಾಯತರ ಕಡೆ ಬೆರಳು ತೋರಿಸಿ ನಿಮ್ಮ ಮೂಗಿಗೆ ಬೆಣ್ಣೆ ಕೊಸರು ಸವರುತ್ತಿದ್ದಾರೆ! ನಿಮ್ಮ ನ್ಯಾಯಯುತ ಪಾಲಿನಲ್ಲಿ ಸಿಂಹಪಾಲು ಕಬಳಿಸಿದ್ದು ಯಾರೆಂದು ನಿಮಗೂ ಚೆನ್ನಾಗಿ ಗೊತ್ತು? ಆದರೂ ಸುಮ್ಮನಿದ್ದೀರಿ! ಯಾಕೆ? ನಿಮ್ಮ ಎದುರು ನಿಂತು ಲಿಂಗಾಯಿತರು, ಒಕ್ಕಲಿಗರನ್ನು ಬೈದರೇ ನಿಮ್ಮ ಹೊಟ್ಟೆ ತುಂಬುವುದೇ? ನಿಮ್ಮ ಮಕ್ಕಳಿಗೆ ನ್ಯಾಯ ಸಿಗುವುದೇ? ಎಂದು ಪ್ರಶ್ನಿಸಿದ್ದಾರೆ.
ಅತೀ.. ಅತೀ ಹಿಂದುಳಿದ 2ಅ ಪ್ರವರ್ಗದಲ್ಲಿ ಅತೀ ಹೆಚ್ಚು ಪಾಲು ಬೆಣ್ಣೆ ತಿಂದವರು ಯಾರು? ಈಗಲಾದರೂ ಸತ್ಯ ಹೇಳಿ ಸಿದ್ದರಾಮಯ್ಯನವರೇ.. ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ ಎಂದು ಕುಮಾರಸ್ವಾಮಿ ವ್ಯಂಗ್ಯದ ದಾಟಿಯಲ್ಲಿ ಕೇಳಿದ್ದಾರೆ.