ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳು ಯಾರು?

donald trump
Published on

ಅಮೆರಿಕ ಅಧ್ಯಕ್ಷ ಚುನಾವಣೆಯ ಆರಂಭಿಕ ಪ್ರಕ್ರಿಯೆ ಶುರುವಾಗಿದೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳ ಆಯ್ಕೆಗೆ ಮಂಗಳವಾರ ಮತದಾನ ನಡೆದಿದೆ. ಈ ಪ್ರಕ್ರಿಯೆ ಅಲ್ಲಿ ‘ಸೂಪರ್ ಟ್ಯೂಸ್​ಡೇ’ ಎಂದೇ ಜನಜನಿತವಾಗಿದೆ. ಅಧ್ಯಕ್ಷೀಯ ಸ್ಥಾನಕ್ಕೆ ಅಭ್ಯರ್ಥಿಗಳು ಅಂತಿಮಗೊಂಡ ಬಳಿಕ ಚುನಾವಣೆಯ ಕಣ ಮತ್ತಷ್ಟು ರಂಗೇರುತ್ತದೆ. ಬುಧವಾರ ಸಂಜೆ ಹೊತ್ತಿಗೆ ಫಲಿತಾಂಶ ದೊರೆಯುವ ಸಾಧ್ಯತೆ ಇದೆ.

ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಅವಧಿಗೆ ಮರುಆಯ್ಕೆ ಬಯಸಿ, ಸ್ಪರ್ಧೆಗೆ ಕಾತರರಾಗಿದ್ದಾರೆ. ಆದರೆ, ಅವರದ್ದೇ ರಿಪಬ್ಲಿಕನ್ ಪಕ್ಷದಿಂದ ಆರಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಗೆ ಉತ್ಸಾಹ ತೋರಿದ್ದಾರೆ. ಡೆಮಾಕ್ರಟಿಕ್ ಪಕ್ಷದಲ್ಲೂ ಅಭ್ಯರ್ಥಿಗಳ ಸಂಖ್ಯೆಗೆ ಕೊರತೆಯೇನಿಲ್ಲ. ಆದರೆ, ಅಂತಿಮವಾಗಿ ಯಾರು ಸ್ಪರ್ಧೆಯಲ್ಲಿ ಉಳಿಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಅಭ್ಯರ್ಥಿಗಳ ಆಯ್ಕೆಗೆ ಮಂಗಳವಾರ ಅಮೆರಿಕದ 14 ರಾಜ್ಯಗಳಲ್ಲಿ ಪ್ರೖೆಮರಿ ವೋಟಿಂಗ್ ನಡೆದಿದೆ. 50 ರಾಜ್ಯಗಳ ಪೈಕಿ ಈ ಮೊದಲೇ ನಾಲ್ಕು ರಾಜ್ಯಗಳಲ್ಲಿ ಪ್ರೖೆಮರಿ ವೋಟಿಂಗ್ ಪೂರ್ಣಗೊಂಡಿದೆ. ಅಮೆರಿಕದಲ್ಲಿ ಆರಂಭದಿಂದಲೂ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ‘ಸೂಪರ್ ಟ್ಯೂಸ್​ಡೇ’ಗೆ ಮತದಾನ ನಡೆಯುತ್ತದೆ.

ಡೆಮಾಕ್ರಟಿಕ್ ಪಾರ್ಟಿಯಲ್ಲಿ ಅಭ್ಯರ್ಥಿಯ ಆಯ್ಕೆ ಎರಡು ಚುನಾವಣೆ ಮೂಲಕ ನಡೆಯುತ್ತದೆ. ಮೊದಲನೆ ಯದು-ಪ್ರೖೆಮರಿ ವೋಟಿಂಗ್. ಎರಡನೇಯದು-ಕಾಕಸ್ ವೋಟಿಂಗ್. ಪ್ರೖೆಮರಿ ವೋಟಿಂಗ್ ಬಗ್ಗೆ ಅಮೆರಿಕ ಸಂವಿಧಾನದಲ್ಲಿ ಲಿಖಿತ ನಿರ್ದೇಶನಗಳೇನಿಲ್ಲ. ಈ ಪ್ರಕ್ರಿಯೆ ಪಕ್ಷ ಮತ್ತು ರಾಜ್ಯಗಳನ್ನು ಅವಲಂಬಿಸುತ್ತದೆ. ಮತ್ತು ಈ ವೋಟಿಂಗ್ ವ್ಯವಸ್ಥೆಯನ್ನು ಆಯಾ ರಾಜ್ಯ ಸರ್ಕಾರಗಳೇ ಮಾಡುತ್ತವೆ.

ಡೆಮಾಕ್ರಟಿಕ್​ನಲ್ಲಿ ಪ್ರಬಲ ಸ್ಪರ್ಧಿಗಳು: ಉಪರಾಷ್ಟ್ರಪತಿ ಜೋ ಬಿಡೆನ್, ಮಾಜಿ ಮೇಯರ್ ಮೈಕಲ್ ಬ್ಲೂಮ್​ಜ್, ಎಮಿ ಕ್ಲೋಬಚರ್, ಸಂಸತ್ ಸದಸ್ಯೆ ತುಳಸಿ ಗಬಾರ್ಡ್, ಎಲಿಜೆಬೆತ್ ವಾರೆನ್, ಬೆರ್ನಿ ಸ್ಯಾಂಡರ್ಸ್.

ಹೀಗೆ ನಡೆಯುತ್ತೆ ಆಯ್ಕೆ: ಅಧ್ಯಕ್ಷೀಯ ಅಭ್ಯರ್ಥಿಗಳ ಆಯ್ಕೆಗಾಗಿ ರಾಜಕೀಯ ಪಕ್ಷಗಳು ಪೂರ್ವಭಾವಿಯಾಗಿ ರಾಷ್ಟ್ರೀಯ ಸಮಾವೇಶವನ್ನು ಸಂಘಟಿಸುತ್ತವೆ. ಪ್ರತಿಯೊಂದು ರಾಜ್ಯದ ಪ್ರತಿನಿಧಿ (ಡೆಲಿಗೇಟ್ಸ್)ಗಳ ಗುಂಪು ಅಧ್ಯಕ್ಷೀಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ.

ಕಾಕಸ್: ರಾಜಕೀಯ ಪಕ್ಷಗಳು ನಡೆಸುವ ಸರಳ ಸಭೆಯನ್ನು ಕಾಕಸ್ ಎನ್ನಲಾಗುತ್ತದೆ. ಪ್ರತ್ಯೇಕವಾಗಿ ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆ ವಿಚಾರಕ್ಕೆ ಇದನ್ನು ನಡೆಸಲಾಗುತ್ತದೆ. ಕಾಕಸ್ ಆರಂಭವಾಗುತ್ತಿದ್ದಂತೆ ಅಧ್ಯಕ್ಷೀಯ ಅಭ್ಯರ್ಥಿಯಾಗುವುದಕ್ಕೆ ಪಕ್ಷದೊಳಗೆ ಇರುವ ಸ್ಪರ್ಧಿಗಳನ್ನು ಬೆಂಬಲಿಸುವ ಡೆಲಿಗೇಟ್ಸ್ ಗುಂಪುಗಳನ್ನು ರಚಿಸುತ್ತಾರೆ. ಇವರಲ್ಲಿ ಯಾರನ್ನೂ ಬೆಂಬಲಿಸದೇ ಇರುವ ಡೆಲಿಗೇಟ್ಸ್ ಮತ್ತೊಂದು ಗುಂಪು ರಚಿಸುತ್ತಾರೆ. ಕಾಕಸ್​ನ ಅಂತ್ಯಕ್ಕೆ ಯಾವ ಸ್ಪರ್ಧಿಯ ಪರ ಗುಂಪಿನಲ್ಲಿ ಅತಿಹೆಚ್ಚು ಡೆಲಿಗೇಟ್ಸ್ ಇದ್ದಾರೋ ಆ ಅಭ್ಯರ್ಥಿಯನ್ನು ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೊಷಿಸಲಾಗುತ್ತದೆ.

ಆಕಾಂಕ್ಷಿಗಳ ಪೈಪೋಟಿ

ಅಧ್ಯಕ್ಷೀಯ ಅಭ್ಯರ್ಥಿಯಾರಾಗಬೇಕೆಂಬ ಆಕಾಂಕ್ಷೆ ಹೊಂದಿದವರ ಪರವಾಗಿ ಸರಣಿ ಭಾಷಣಗಳು, ಸಾರ್ವಜನಿಕ ಸಭೆ ಸಮಾರಂಭಗಳ ಬಳಿಕ ಈ ಸಮಾವೇಶದಲ್ಲಿ ಪ್ರತಿಯೊಂದು ರಾಜ್ಯದ ಡೆಲಿಗೇಟ್ಸ್​ಗಳು ಮತ ಚಲಾಯಿಸುತ್ತಾರೆ. ಯಾವ ಆಕಾಂಕ್ಷಿಗೆ ಮೊದಲು ಅತಿ ಹೆಚ್ಚಿನ ಮತ ಲಭಿಸುತ್ತದೆಯೋ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೊಷಿಸಲಾಗುತ್ತದೆ. ಬಳಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

ನ್ಯಾಷನಲ್ ಡೆಲಿಗೇಟ್ಸ್ ಆಯ್ಕೆ

ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವ ಡೆಲಿಗೇಟ್ಸ್ ಯಾರೆಂಬುದನ್ನು ಆಯಾ ಪಕ್ಷದ ನೀತಿ ನಿಯಮಾವಳಿಗೆ ಅನುಸಾರವಾಗಿ ಆಯಾ ರಾಜ್ಯದಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ನೀತಿ ನಿಯಮಗಳು ವರ್ಷದಿಂದ ವರ್ಷಕ್ಕೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಿರಬಹುದು. ಪ್ರಸ್ತುತ ರಾಜ್ಯಮಟ್ಟದಲ್ಲಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕಾಕಸ್ ಮತ್ತು ಪ್ರೖೆಮರಿ ಎಂಬ ಎರಡು ವಿಧಾನಗಳು ಚಾಲ್ತಿಯಲ್ಲಿವೆ.

ಪ್ರೖೆಮರಿ ವಿಧಾನ

ಇದು ರಾಜ್ಯಗಳಲ್ಲಿ ನಡೆಯುತ್ತದೆ. ಎಲ್ಲ ನೋಂದಾಯಿತ ಮತದಾರರು ಪ್ರೆಸಿಡೆನ್ಷಿಯಲ್ ಪ್ರೖೆಮರಿ ಎಲೆಕ್ಷನ್​ನಲ್ಲಿ ಭಾಗವಹಿಸಬಹುದು. ಇಲ್ಲೂ ಗುಪ್ತ ಮತದಾನದ ಮೂಲಕವೇ ಆಯ್ಕೆ ನಡೆಯುತ್ತದೆ. ಮತಪತ್ರದಲ್ಲಿ ಉಲ್ಲೇಖಿಸಿರುವ ಎಲ್ಲ ನೋಂದಾಯಿತ ಅಭ್ಯರ್ಥಿಗಳ ಪೈಕಿ ಯಾರನ್ನಾದರೂ ಮತದಾರರು ಆಯ್ಕೆ ಮಾಡಬಹುದಾಗಿದೆ. ಇಲ್ಲಿ ಕ್ಲೋಸ್ಡ್ ಮತ್ತು ಓಪನ್ ಎಂಬ ಎರಡು ರೀತಿಯ ಪ್ರೖೆಮರಿ ಮತದಾನಗಳಿವೆ.

ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚೆ

ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳು ತಮ್ಮ ಅಧ್ಯಕ್ಷೀಯ ಅಭ್ಯರ್ಥಿಗಳನ್ನು ಘೊಷಿಸಿದ ಬಳಿಕ, ಪ್ರಸ್ತುತ ವಿವಾದಾತ್ಮಕ ವಿಷಯಗಳ ಬಗ್ಗೆ ಮೂರು ಸುತ್ತಿನ ಚರ್ಚೆ ನಡೆಯುತ್ತದೆ. ಈ ಚರ್ಚೆ ನಡೆಸಬೇಕು ಎಂದು ಸಂವಿಧಾನದಲ್ಲಿ ಹೇಳಿಲ್ಲವಾದರೂ 1960(ನಿಕ್ಸನ್ ವರ್ಸಸ್ ಕೆನಡಿ)ರಿಂದೀಚೆಗೆ ಸಂಪ್ರದಾಯವಾಗಿದೆ. ಇನ್ನೂ ಯಾರನ್ನು ಬೆಂಬಲಿಸುವುದೆಂಬ ಗೊಂದಲದಲ್ಲಿರುವ ಮತದಾರರನ್ನು ಗಮನದಲ್ಲಿರಿಸಿ ನಡೆಸುವ ಈ ಚರ್ಚೆಯನ್ನು ಟಿವಿ ಚಾನೆಲ್, ರೇಡಿಯೋಗಳಲ್ಲಿ ಲೈವ್ ಆಗಿ ಪ್ರಸಾರ ಮಾಡಲಾಗುತ್ತದೆ.

ಭಿನ್ನ ವಿಧಾನ

ಪ್ರೖೆಮರಿ ಎಲೆಕ್ಷನ್ ವಿಧಾನ, ಮತಪತ್ರದಲ್ಲಿ ಅಭ್ಯರ್ಥಿಗಳ ಹೆಸರು ಕೂಡ ವ್ಯತ್ಯಾಸವಾಗಿರುತ್ತವೆ. ಬಹುತೇಕ ರಾಜ್ಯಗಳಲ್ಲಿ ಮತಪತ್ರಗಳಲ್ಲಿ ನೈಜ ಆಕಾಂಕ್ಷಿಗಳ ಹೆಸರು ಇರುತ್ತದೆ. ಇನ್ನು ಕೆಲವು ರಾಜ್ಯಗಳಲ್ಲಿ ಡೆಲಿಗೇಟ್ಸ್ ಅಥವಾ ಪ್ರತಿನಿಧಿಗಳ ಹೆಸರಿನ ಮತಪತ್ರ ಇದ್ದು, ಅದರಲ್ಲಿ ಅವರು ಅಧ್ಯಕ್ಷೀಯ ಅಭ್ಯರ್ಥಿ ಯಾರಾಗಬಹುದು ಎಂದು ಬೆಂಬಲ ಸೂಚಿಸಬಹುದಾಗಿದೆ. ಕೆಲವು ರಾಜ್ಯಗಳಲ್ಲಿ ಡೆಲಿಗೇಟ್ಸ್ ತಾವು ಘೊಷಿಸಿದ ಅಭ್ಯರ್ಥಿ ಪರವಾಗಿ ಬದ್ಧರಾಗಿರಬೇಕು. ಇನ್ನು ಕೆಲವು ರಾಜ್ಯಗಳಲ್ಲಿ ಯಾವ ಅಭ್ಯರ್ಥಿ ಪರವಾಗಿ ಬೇಕಾದರೂ ಮತ ಚಲಾಯಿಸುವ ಮುಕ್ತ ಅವಕಾಶವಿದೆ.

ಬೆಂಬಲದ ಲೆಕ್ಕಾಚಾರ

ರಾಷ್ಟ್ರಮಟ್ಟದಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳ ಆಯ್ಕೆಗೆ ಡೆಲಿಗೇಟ್ಸ್ ಮತವನ್ನು ಗಣನೆಗೆ ತೆಗೆದುಕೊಳ್ಳುವ ವಿಧಾನಗಳು ಬೇರೆ ಬೇರೆಯಾಗಿರುತ್ತದೆ. ಡೆಮಾಕ್ರಟಿಕ್ ಪಕ್ಷದಲ್ಲಿ ಪ್ರೊಪೋರ್ಷನಲ್ ವಿಧಾನ ಬಳಸಲಾಗುತ್ತದೆ. ಇಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯನ್ನು ರಾಜ್ಯಗಳ ಕೌಕಸ್​ನಲ್ಲಿ ಎಷ್ಟು ಡೆಲಿಗೇಟ್ಸ್ ಬೆಂಬಲಿಸಿದ್ದಾರೆ ಎಂಬುದನ್ನು ಅಥವಾ ಅವರು ಎಷ್ಟು ಪ್ರೖೆಮರಿ ಮತಗಳಿಸಿದ್ದಾರೆ ಎಂಬುದನ್ನು ಗಮನಿಸಲಾಗುತ್ತದೆ. ಉದಾಹರಣೆಗೆ, ಒಂದು ರಾಜ್ಯದ ಡೆಮಾಕ್ರಟಿಕ್ ಸಭೆಯಲ್ಲಿ ಮೂವರು ಅಭ್ಯರ್ಥಿಗಳಿದ್ದು 20 ಡೆಲಿಗೇಟ್ಸ್ ಇದ್ದರೆ, ಒಂದೊಮ್ಮೆ ಎ ಎಂಬ ಅಭ್ಯರ್ಥಿ ಎಲ್ಲ ಕೌಕಸ್​ನ ಶೇ.70 ಪ್ರೖೆಮರಿ ಮತಗಳನ್ನು ಗಳಿಸಿ, ಬಿ ಎಂಬ ಅಭ್ಯರ್ಥಿ ಶೇ.20, ಸಿ ಎಂಬ ಅಭ್ಯರ್ಥಿ ಶೇ.10 ಮತ ಗಳಿಸಿದರೆ, ಆಗ ಎ ಅಭ್ಯರ್ಥಿಗೆ 14 ಡೆಲಿಗೇಟ್ಸ್ ಬೆಂಬಲ, ಬಿ ಗೆ 4, ಸಿ ಗೆ 2 ಡೆಲಿಗೇಟ್ಸ್ ಬೆಂಬಲ ಸಿಕ್ಕಿದೆ ಎಂದು ಪರಿಗಣಿಸಲಾಗುತ್ತದೆ. ರಿಪಬ್ಲಿಕನ್ ಪಕ್ಷದಲ್ಲಿ ಪ್ರೊಪೋರ್ಷನಲ್ ಅಥವಾ ‘ವಿನ್ನರ್-ಟೇಕ್-ಆಲ್’ ವಿಧಾನದ ಮೂಲಕ ಅಭ್ಯರ್ಥಿಯನ್ನು ಆರಿಸಲಾಗುತ್ತದೆ. ವಿನ್ನರ್ ಟೇಕ್ ಆಲ್ ವಿಧಾನದಲ್ಲಿ ರಾಷ್ಟ್ರೀಯ ಸಮಾವೇಶದ ವೇಳೆ, ಅಭ್ಯರ್ಥಿಯು ಅತಿಹೆಚ್ಚಿನ ಕೌಕಸ್ ಅಥವಾ ಪ್ರೖೆಮರಿ ಮತಗಳಿಸಿದರೆ ಅಂಥವರನ್ನೇ ಅಭ್ಯರ್ಥಿ ಎಂದು ಘೊಷಿಸಲಾಗುತ್ತದೆ.

ಒಟ್ಟು ಡೆಲಿಗೇಟ್ಸ್: 3,979ಬಹುಮತಕ್ಕೆ ಬೇಕಾದ ಮತಗಳು: 1,991ಸೂಪರ್ ಟ್ಯೂಸ್​ಡೇಯಂದು ಮತ ಚಲಾಯಿಸಿದವರು: 1,357ಈಗಾಗಲೇ ಮತ ಚಲಾಯಿಸಿದವರು 155

(ಅನಿವಾರ್ಯ ಕಾರಣದಿಂದ ಪ್ರೇಮಶೇಖರ ಅವರ ‘ಜಗದಗಲ’ ಅಂಕಣ ಪ್ರಕಟಗೊಂಡಿಲ್ಲ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net