ಮೋದಿ 3.0 ಪ್ರಮಾಣ ವಚನ ಸಮಾರಂಭಕ್ಕೆ ಯಾರೆಲ್ಲಾ ಬರಲಿದ್ದಾರೆ?: ಇಲ್ಲಿದೆ ಜಾಗತಿಕ ನಾಯಕರ ಪಟ್ಟಿ

Untitled-design-19-1
Published on

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಕಳೆದ ಮಂಗಳವಾರ (ಜೂನ್ 4) ಬಂದಿದೆ. ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 293 ಸ್ಥಾನಗಳನ್ನು ಪಡೆದು ಗೆಲ್ಲುವ ಮೂಲಕ ಬಹುಮತದ ಗಡಿ ದಾಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಜೂನ್​​ 9ರಂದು (ಭಾನುವಾರ) ಪ್ರಮಾಣವಚನ ಸ್ವೀಕರಿಸಲ್ಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ ಮತ್ತು ಮಾರಿಷಸ್‌ನ ಉನ್ನತ ನಾಯಕರನ್ನು ಆಹ್ವಾನಿಸಲಾಗಿದ್ದು, ಕಾರ್ಯಕ್ರಮದಲ್ಲಿ ವಿದೇಶಿ ನಾಯಕರು ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೂ ಮೋದಿ ದೂರವಾಣಿ ಕರೆಯಲ್ಲಿ ಮಾತನಾಡಿದ್ದು, ಫೋನ್ ಸಂಭಾಷಣೆಯಲ್ಲಿ ಮೋದಿ ಅವರು ತಮ್ಮ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹಸೀನಾ ಅವರನ್ನು ಆಹ್ವಾನಿಸಿದ್ದಾರೆ. ಮತ್ತು ಹಸೀನಾ ಅವರು ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಕಚೇರಿಯ ಮಾಧ್ಯಮ ವಿಭಾಗವು ಮೋದಿ ಅವರು ರನಿಲ್​ ಅವರನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ ಎಂದು ಹೇಳಿದೆ. ವಿಕ್ರಮಸಿಂಘೆ ಅವರು ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ ಎಂದು ಕಚೇರಿ ಹೇಳಿದೆ

ಇನ್ನು ಪ್ರಚಂಡ ಎಂಬ ಖ್ಯಾತಿಯ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರನ್ನು ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿದ್ದು ದಹಲ್​​ ಭಾಗವಹಿಸಲಿದ್ದಾರೆ ಎಂದು ನೇಪಾಳಿ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಭೂತಾನ್ ಪ್ರಧಾನಿ ತ್ಶೆರಿಂಗ್ ಟೊಬ್ಗೇ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರನ್ನು ಮೋದಿ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸುವ ಸಾಧ್ಯತೆ ಇದೆ.

2019ರ ಲೋಕಸಭಾ ಚುನಾವಣೆಯ ನಂತರ ಮೋದಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತ ಬಿಮ್ಸ್ಟೆಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿತ್ತು. BIMSTEC ಎಂದರೆ ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಅನ್ನು ಒಳಗೊಂಡಿರುವ ಪ್ರಾದೇಶಿಕ ಗುಂಪು. ಕಾರ್ಯಕ್ರಮದಲ್ಲಿ ವಿವಿಐಪಿಗಳು ಸೇರಿದಂತೆ 8,000ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net