

ಬೆಂಗಳೂರು: ಅಧಿಕಾರ ವ್ಯಾಪ್ತಿ ಮೀರಿ ಸಿವಿಲ್ ವ್ಯಾಜ್ಯಗಳಲ್ಲಿ ಆದೇಶ ನೀಡುತ್ತಿದ್ದ ಉಪವಿಭಾಗಾಧಿಕಾರಿಗಳಿಗೆ (ಎಸಿ) ಕಂದಾಯ ಸಚಿವರು ಬಿಸಿ ಮುಟ್ಟಿಸಿದ್ದಾರೆ. ಇನ್ಮುಂದೆ ಆದೇಶ ಮಾಡುವಾಗ ಯಾವ ಕಾಯ್ದೆ ಮತ್ತು ಸೆಕ್ಷನ್‌ನಲ್ಲಿ ಆರ್ಡರ್ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಬೇಕೆಂದು ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದರು.
ವಿಕಾಸಸೌಧದ ಕಚೇರಿಯಿಂದ ಶನಿವಾರ ವಿಡಿಯೋ ಕಾನ್ಫರೆನ್ಸ್ನಲ್ಲಿ ಉಪವಿಭಾಗಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಕೆಲ ಎಸಿಗಳು ಕಾನೂನು ಮೀರಿ ಆದೇಶ ನೀಡಿರುವುದು ಕಂಡುಬಂದಿದೆ. ಈ ಆದೇಶಗಳು ನ್ಯಾಯಸಮ್ಮತವಾಗಿಲ್ಲ. ಐದು ಜಿಲ್ಲೆಗಳ ಎಸಿಗಳು ಕಾನೂನು ಮೀರಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ. ವರದಿ ಕೈಸೇರಿದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಆದೇಶ ಪ್ರಶ್ನಿಸಿ ಕೋರ್ಟ್ ಮೊರೆಹೋದರೆ ನಾವೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
ಕಾನೂನು ಮತ್ತು ವ್ಯಾಪ್ತಿ ಮೀರಿ ಸಿವಿಲ್ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಎಸಿಗಳು ಸಿವಿಲ್ ಕೇಸ್‌ಗಳಲ್ಲಿ ಆದೇಶ ಬರೆಯುವಾಗ ಯಾವ ಕಾಯ್ದೆ ಮತ್ತು ಸೆಕ್ಷನ್‌ನಲ್ಲಿ ಆರ್ಡರ್ ಮಾಡಲಾಗಿದೆ, ಅದನ್ನು ಮಾಡಲು ಕಾನೂನಲ್ಲಿ ಅಧಿಕಾರ ಇದೆಯಾ? ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕೆಂದು ಕಟ್ಟಾಜ್ಞೆ ಮಾಡಿದ್ದಾರೆ.
ಜನರ ನ್ಯಾಯಬದ್ಧ ಹಕ್ಕನ್ನು ಅಧಿಕಾರಿಗಳು ಮೊಟಕುಗೊಳಿಸಲು ಸಾಧ್ಯವಿಲ್ಲ. ಜನರಿಗೆ ಸಿವಿಲ್ ಮೊಕದ್ದಮೆಗಳು ಎಸಿ ಕೋರ್ಟ್‌ನಲ್ಲಿ ಮುಕ್ತಾಯವಾಗಲಿ ಎಂಬ ಅಭಿಲಾಷೆ ಇರುತ್ತದೆ. ಆಗಂತ ನಿಯಮ ಮೀರಿ ಮನಸೋಇಚ್ಛೆ ಸ್ವೀಕರಿಸುವುದು ಸರಿಯಲ್ಲ. ಈ ರೀತಿ ಪ್ರಕರಣ ದಾಖಲಿಸಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದರು. ಬಹುತೇಕ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲಿಗೇ ಹೋದರೂ ಇಲಾಖೆಯ ಜನಸ್ನೇಹಿ ಕೆಲಸಕ್ಕೆ ಜನ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲ ಅಧಿಕಾರಿಗಳ ತಪ್ಪುಗಳಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಬೇಜವಾಬ್ದಾರಿ ಅಧಿಕಾರಿಗಳನ್ನು ಸರಿದಾರಿಗೆ ತರುವುದು ಗೊತ್ತಿದೆ ಎಂದು ಚಾಟಿ ಬೀಸಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್ ಇದ್ದರು.
4 ತಿಂಗಳಲ್ಲಿ ಇತ್ಯರ್ಥ ಮಾಡಿ !
ಎಸಿ ಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು 2 ತಿಂಗಳಲ್ಲಿ ಇತ್ಯರ್ಥ ಮಾಡಬೇಕೆಂದು ಗುರಿ ನಿಗದಿಪಡಿಸಿದರೆ, ಆರು ತಿಂಗಳಾದರೂ ಟಾರ್ಗೆಟ್ ಮುಟ್ಟಲು ಸಾಧ್ಯವಾಗದಿರುವುದು ಸರಿಯಲ್ಲ. ಶೀಘ್ರ ಬಾಕಿ ಪ್ರಕರಣ ಇತ್ಯರ್ಥಗೊಳಿಸಬೇಕು. ಎಸಿ ಕೋರ್ಟ್‌ನಲ್ಲಿ 6 ತಿಂಗಳು ಮೀರಿದ 18 ಸಾವಿರ ಪ್ರಕರಣಗಳು ಬಾಕಿ ಇವೆ. 1 ವರ್ಷ ಮೀರಿದ 14 ಸಾವಿರ, 5 ವರ್ಷ ಮೇಲ್ಪಟ್ಟ 4 ಸಾವಿರ ಪ್ರಕರಣ ಬಾಕಿ ಇವೆ. ನ್ಯಾಯಬದ್ಧವಾಗಿ ಎಲ್ಲವನ್ನೂ ಇತ್ಯರ್ಥ ಮಾಡಬೇಕು. 4 ತಿಂಗಳಿಗಿಂತ ಅಧಿಕ ಅವಧಿಗೆ ಯಾವ ಪ್ರಕರಣಗಳೂ ಉಳಿಯಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಚಿಕ್ಕಮಗಳೂರು ಎಸಿಗೆ ಕ್ಲಾಸ್
ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಆರಂಭಿಸುತ್ತಿದ್ದಂತೆ ಚಿಕ್ಕಮಗಳೂರು ಎಸಿ ಸುದರ್ಶನ್ ಮೊಬೈಲ್ ಸಂಭಾಷಣೆಯಲ್ಲಿ ತಲ್ಲೀನರಾಗಿದ್ದರು. ಅಧಿಕಾರಿ ವರ್ತನೆ ವಿರುದ್ಧ ಬೇಸರ ಹೊರಹಾಕಿದ ಕೃಷ್ಣಬೈರೇಗೌಡ, ಸ್ವಾಮಿ ನೀವು ನನಗೆ ಗೌರವ ನೀಡುವ ಅವಶ್ಯಕತೆ ಇಲ್ಲ. ಕನಿಷ್ಠ ನನ್ನ ಕುರ್ಚಿಗಾದರೂ ಗೌರವ ನೀಡಿ. ನನ್ನ ಸ್ವಂತ ಕೆಲಸಕ್ಕೆ ಸಭೆ ಕರೆದಿಲ್ಲ. ಇಲಾಖೆಯನ್ನು ಜನಸ್ನೇಹಿಗೊಳಿಸುವ ಸಂಬಂಧ ಸಭೆ ನಡೆಸಲಾಗುತ್ತಿದೆ. ಗೌರವ ಇರಲಿ ಎಂದು ಮನವಿ ಮಾಡಿದರು.