

ನವದೆಹಲಿ: ಕುಖ್ಯಾತ ಪಾತಕಿ ವಿಕಾಸ್ ದುಬೆಯನ್ನು ಕಾನ್ಪುರಕ್ಕೆ ಕರೆತರುವಾಗ ಎದುರಿಗೆ ದನದ ಹಿಂಡು ಬಂದಿತು. ಅದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ವಾಹನ ಪಲ್ಟಿಯಾಯಿತು ಎಂದು ದುಬೆ ಬಂಧನಕ್ಕೆ ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ಕಾರ್ಯಪಡೆ ಹೇಳಿದೆ.
ಈ ಬಗ್ಗೆ ಶುಕ್ರವಾರ ಸಂಜೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಾರ್ಯಪಡೆ, ವಾಹನ ಪಲ್ಟಿ ಹೊಡೆಯುತ್ತಲೇ ಅದರಿಂದ ಜಿಗಿದ ವಿಕಾಸ್ ದುಬೆ ತಪ್ಪಿಸಿಕೊಂಡು ಹೋಗಲು ಯತ್ನಿಸಿದ. ನಾವು ಆತನನ್ನು ಬೆನ್ನಟ್ಟಿದೆವು. ಜೀವಂತವಾಗಿ ಆತನನ್ನು ಸೆರೆಹಿಡಿಯಬೇಕು ಎನ್ನುವುದು ನಮ್ಮ ಪ್ರಯತ್ನವಾಗಿತ್ತು ಎಂದು ತಿಳಿಸಿದೆ.
ಆದರೆ, ಅತ ನಮ್ಮ ಸಿಬ್ಬಂದಿಯಿಂದ ಅಪಹರಿಸಿದ್ದ ಪಿಸ್ತೂಲ್ನಿಂದ ನಿರಂತರವಾಗಿ ಗುಂಡು ಹಾರಿಸಲಾರಂಭಿಸಿದ. ಆಗ ನಮ್ಮ ಸಿಬ್ಬಂದಿ ಅನಿವಾರ್ಯವಾಗಿ ಆತನತ್ತ ಗುಂಡು ಹಾರಿಸಬೇಕಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಹೇಳಿದೆ.
ಎದೆ, ಕೈಗೆ ಗುಂಡು: ವಿಕಾಸ್ ದುಬೆಯನ್ನು ಆಸ್ಪತ್ರೆಗೆ ಕರೆತಂದಾಗ ಆತನಿಗೆ ನಾಲ್ಕು ಗುಂಡುಗಳು ತಗುಲಿದ್ದವು ಎಂದು ಕಾನ್ಪುರದ ಎಲ್ಎಲ್ಆರ್ ಆಸ್ಪತ್ರೆಯ ಪ್ರಿನ್ಸಿಪಾಲ್ ಡಾ. ಆರ್.ಬಿ. ಕಮಲ್ ಹೇಳಿದ್ದಾರೆ. ಮೂರು ಗುಂಡುಗಳು ಆತನ ಎದೆಭಾಗದಲ್ಲಿದ್ದರೆ, ಒಂದು ಗುಂಡು ಆತನ ಕೈಗೆ ತಗುಲಿತ್ತು ಎಂದು ವಿವರಿಸಿದ್ದಾರೆ.
ವಿಕಾಸ್ ದುಬೆ ಸಿಡಿಸಿದ ಗುಂಡುಗಳು ತಗುಲಿ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ಆದರೆ, ಗುಂಡುಗಳು ಅವರನ್ನು ಸವರಿಕೊಂಡು ಹೋಗಿವೆ ಎಂದು ಹೇಳಿದ್ದಾರೆ.