

ವಿಜಯವಾಡ: ಗಣೇಶ ಉತ್ಸವದ ಪ್ರಸಾದ ವಿತರಣೆಯ ಕಾರ್ಯಕ್ರಮದ ವೇಳೆ ಆಘಾತಕಾರಿ ಘಟನೆಯೊಂದು ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಅಡುಗೆ ಮನೆಯಲ್ಲಿ ಬಿಸಿಯಾದ ಸಾಂಬಾರ್ ಪಾತ್ರೆ ( Boiled Sambar ) ಪಕ್ಕಕ್ಕೆ ಇಡುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಾಂಬಾರ್ ಪಾತ್ರೆಗೆ ಬಿದ್ದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಭಾನುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಗಣೇಶ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅನ್ನದಾನ ಕಾರ್ಯಕ್ರಮಕ್ಕಾಗಿ ಭಕ್ತರಿಗೆ ಆಹಾರ ತಯಾರಿಸುವ ಸಿದ್ಧತೆಗಳು ಅಡುಗೆ ಮನೆಯಲ್ಲಿ ಭರಾಟೆಯಿಂದ ನಡೆದಿತ್ತು. ಈ ವೇಳೆ ಸಾಂಬಾರ್ ಸಿದ್ಧಪಡಿಸುವ ಕಾರ್ಯದಲ್ಲಿ ಸ್ಥಳೀಯ ಮಹಿಳೆಯರು ನಿರತರಾಗಿದ್ದರು.
ವಿಜಯವಾಡ ಮೂಲದ 46 ವರ್ಷ ವಯಸ್ಸಿನ ಸುಜಾತಾ ಎಂಬ ಮಹಿಳೆ ಭಾನುವಾರ ಬೆಳಗ್ಗೆ ಅಡುಗೆ ತಯಾರಿಕೆಯಲ್ಲಿ ಸಹಾಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಿಸಿಯಾದ ಸಾಂಬಾರ್ ಇದ್ದ ದೊಡ್ಡ ತಾಮ್ರದ ಪಾತ್ರೆಯನ್ನು ಇನ್ನೊಬ್ಬರ ಸಹಾಯದಿಂದ ಎತ್ತಿ ಪಕ್ಕಕ್ಕೆ ಇಡುವಾಗ ಸುಜಾತಾ ಅವರ ಕಾಲು ಆಕಸ್ಮಿಕವಾಗಿ ಜಾರಿದೆ. ಪರಿಣಾಮವಾಗಿ ಅವರು ನೇರವಾಗಿ ಕುದಿಯುತ್ತಿದ್ದ ಸಾಂಬಾರ್ ಪಾತ್ರೆಗೆ ಬಿದ್ದಿದ್ದು, ಇದರ ಭೀಕರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಸಿ ಸಾಂಬಾರ್ ಪಾತ್ರಗೆ ಬಿದ್ದ ಪರಿಣಾಮ ಗಂಭೀರ ಸುಟ್ಟ ಗಾಯಗಳಿಂದ ಬಳಲಿದ ಸುಜಾತಾ ಅವರನ್ನು ಕೂಡಲೇ ಆಯೋಜಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಜಾತಾ ಅವರು ಸೋಮವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇನ್ನು ಈ ದುರ್ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಆರಂಭಿಸಿದ್ದಾರೆ. ಮಹಿಳೆ ಸಾಂಬಾರ್ ಪಾತ್ರೆಗೆ ಬಿದ್ದ ಸಂದರ್ಭದ ಎಲ್ಲ ಆಯಾಮಗಳು ಹಾಗೂ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, (ಏಜೆನ್ಸೀಸ್).