

ಮುಂಬೈ: 2023ರ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆಗೊಂಡು ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಅನಿಮಲ್ ಚಿತ್ರವು ಬಾಕ್ಸ್ಆಫೀಸ್ನಲ್ಲಿ ಮಾತ್ರ ಧೂಳೆಬ್ಬಿಸಿತ್ತು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚತ್ರವು ರಶ್ಮಿಕಾ ಮಂದಣ್ಣ, ತ್ರಿಪ್ತಿ ದಿಮ್ರಿ ಹಾಗೂ ರಣವೀರ್ ಕಪೂರ್ಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು. ಈ ಚಿತ್ರದ ಬಳಿಕ ನಟರು ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಚಿತ್ರ ಬಡುಗಡೆಯಾಗಿ ಏಳು ತಿಂಗಳಾದ ಮೇಲೆ ಚಿತ್ರದ ಕುರಿತು ಮಾತನಾಡಿರುವ ರಶ್ಮಿಕಾ ರಣವೀರ್ ಕಪೂರ್ ಪಾತ್ರವನ್ನು ಸ್ಟುಪಿಡ್ ಎಂದು ಕರೆದಿದ್ದಾರೆ.
ಅನಿಮಲ್ ಚಿತ್ರದಲ್ಲಿ ರಣವೀರ್ ಕಪೂರ್ ರಣವಿಜಯ್ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ರಣ್ವಿಜಯ್ ಸಿಂಗ್ ಹಾಗೂ ಗೀತಾಂಜಲಿ ಪ್ರೀತಿಸಿ ಮದುವೆ ಆಗಿರುತ್ತಾರೆ. ಎಂದಿಗೂ ನಿನಗೆ ಮೋಸ ಮಾಡಲ್ಲ ಅಂತ ರಣ್ವಿಜಯ್ ಸಿಂಗ್ ತಾಳಿ ಕಟ್ಟುವ ವೇಳೆ ಪ್ರಮಾಣ ಮಾಡಿರುತ್ತಾನೆ. ಹಾಗಿದ್ದರೂ ಕೂಡ ಆತ ಪರಸ್ತ್ರೀ ಸಹವಾಸ ಮಾಡಿ, ಗೀತಾಂಜಲಿಗೆ ಮೋಸ ಮಾಡುತ್ತಾನೆ.
ಆ ವಿಡಿಯೋ ತುಣುಕನ್ನು ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ಗಂಡಸನ್ನು ನಂಬುವುದಕ್ಕಿಂತ ಭಯಾನಕವಾದ ವಿಷಯ ಬೇರೇನೂ ಇಲ್ಲ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇತ್ತ ಈ ಪೋಸ್ಟ್ಗೆ ಕಮೆಂಟ್ ಮೂಲಕ ಪ್ರತಿಕ್ರಿಯಿಸಿರುವ ರಶ್ಮಿಕಾ ತಿದ್ದುಪಡಿ: ಮೂರ್ಖನಾದ ಗಂಡಸನ್ನು ನಂಬುವುದು ಭಯಾನಕ. ತುಂಬ ಒಳ್ಳೆಯ ಗಂಡಸರು ಇದ್ದಾರೆ. ಅಂಥವರನ್ನು ನಂಬುವುದು ವಿಶೇಷ ಎಂದು ರಿಪ್ಲೈ ಮಾಡಿದ್ದಾರೆ.
ಇತ್ತ ಈ ಪೋಸ್ಟ್ಗೆ ಪರ-ವಿರೋಧದ ಕಮೆಂಟ್ಗಳು ವ್ಯಕ್ತವಾಗುತ್ತಿದ್ದು, ಹಲವರು ಸ್ತ್ರೀ ವಿರೋಧದ ಸಿನಿಮಾವನ್ನು ಬೆಂಬಲಿಸುವುದಕ್ಕಿಂತ ಸುಮ್ಮನಿರುವುದೇ ವಾಸಿ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಕೌರ್ಯ ಅತಿಯಾಗಿದ್ದು, ಈ ರೀತಿಯ ಚಿತ್ರಗಳು ಸಮಾಜದಲ್ಲಿ ಇನ್ನಷ್ಟು ಕ್ರೈಂ ಮಾಡುವುದಕ್ಕೆ ಪ್ರೇರಣೆ ನೀಡುತ್ತವೆ ಎಂದು ಕಿಡಿಕಾರಿದ್ದಾರೆ.