

ನವದೆಹಲಿ: ಉತ್ತರ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಬುಲ್ಡೋಜರ್ ಆ್ಯಕ್ಷನ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ(ಅಕ್ಟೋಬರ್ 1) ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸಾರ್ವಜನಿಕ ಸುರಕ್ಷತೆಯು ಅತಿಮುಖ್ಯವಾಗಿದೆ. ರಸ್ತೆ, ಜಲಮಾರ್ಗ, ಅಥವಾ ರೈಲ್ವೆ ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ರಚನೆಯನ್ನು ತೆಗೆದುಹಾಕಬೇಕು ಎಂದು ಹೇಳಿದೆ. ಇದರೊಂದಿಗೆ ನ್ಯಾಯಾಂಗದ ಅನುಮೋದನೆ ಇಲ್ಲದೆ ದೇಶಾದ್ಯಂತ ನೆಲಸಮವನ್ನು ನಿಷೇಧಿಸುವ ತನ್ನ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿತು ಮತ್ತು ನಿರ್ಧಾರವನ್ನು ಕಾಯ್ದಿರಿಸಿತು.
ಬುಲ್ಡೋಜರ್ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠವು, ಜನರ ಸುರಕ್ಷತೆಯೇ ಮುಖ್ಯ. ದೇವಸ್ಥಾನವಾಗಲಿ, ದರ್ಗಾ ಆಗಲಿ ರಸ್ತೆ, ಜಲಮಾರ್ಗ, ರೈಲು ಹಳಿಗಳಿಗೆ ಅಡ್ಡಿಪಡಿಸುವ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆಗೆದುಹಾಕಬೇಕಾಗಿದೆ ಎಂದು ಹೇಳಿದರು.
ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ಅಕ್ರಮ ನಿರ್ಮಾಣ ಹಿಂದೂ ಅಥವಾ ಮುಸಲ್ಮಾನರದ್ದೇ ಆಗಿರಲಿ ಕ್ರಮ ಕೈಗೊಳ್ಳಬೇಕು. ಬುಲ್ಡೋಜರ್ ಕಾರ್ಯಾಚರಣೆ ಮತ್ತು ಅತಿಕ್ರಮಣ ವಿರೋಧಿ ಅಭಿಯಾನದ ನ್ಯಾಯಾಲಯದ ನಿರ್ದೇಶನಗಳು ಧರ್ಮ ಮತ್ತು ಸಮುದಾಯವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೂ ಅನ್ವಯಿಸುತ್ತದೆ ಎಂದು ಪೀಠವು ಹೇಳಿದೆ.
ಒಬ್ಬ ವ್ಯಕ್ತಿ ಆರೋಪಿ ಅಥವಾ ತಪ್ಪಿತಸ್ಥ ಎಂಬ ಕಾರಣಕ್ಕೆ ವಿಧ್ವಂಸಕ ಕೃತ್ಯವನ್ನು ನಡೆಸಲಾಗುವುದಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಅಲ್ಲದೆ ಕೆಡವಲು ಆದೇಶವನ್ನು ಅಂಗೀಕರಿಸುವ ಮೊದಲು ಸೀಮಿತ ಸಮಯ ಇರಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಪ್ರತಿ ವರ್ಷ 4 ರಿಂದ 5 ಲಕ್ಷ ಕೆಡವುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದು ಕಳೆದ ಕೆಲವು ವರ್ಷಗಳ ಅಂಕಿ ಅಂಶ ಎಂದು ನ್ಯಾಯಾಲಯ ತಿಳಿಸಿದೆ.
ವಿವಿಧ ರಾಜ್ಯಗಳಲ್ಲಿ ಬುಲ್ಡೋಜರ್ ಕ್ರಮಗಳ ವಿರುದ್ಧದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತನ್ನ ಅನುಮತಿಯಿಲ್ಲದೆ ದೇಶದಲ್ಲಿ ಯಾವುದೇ ಆಸ್ತಿಗಳನ್ನು ಅಕ್ಟೋಬರ್ 1ರವರೆಗೆ ನೆಲಸಮ ಮಾಡಬಾರದು ಎಂದು ಸೆಪ್ಟೆಂಬರ್ 17 ರಂದು ಆದೇಶಿಸಿತ್ತು. ಒಂದೇ ಒಂದು ಅಕ್ರಮ ಧ್ವಂಸ ಪ್ರಕರಣವಿದ್ದರೂ ಅದು ನಮ್ಮ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಪೀಠ ಹೇಳಿತ್ತು.(ಏಜೆನ್ಸೀಸ್)