

ಗದಗ: ರಾಜ್ಯದಲ್ಲಿ ಚುನಾವಣೆ ಕಾವೇರಿದ್ದು, ಪ್ರಚಾರದ ಭರಾಟೆಯಲ್ಲಿ ಟೀಕೆಗಳ ಸುರಿಮಳೆಯೊಂದಿಗೆ, ಆರೋಪ-ಪ್ರತ್ಯಾರೋಪಗಳ ವಾಗ್ದಾಳಿಯೂ ನಡೆಯಲಾರಂಭಿಸಿದೆ. ಈ ಮಧ್ಯೆ ಬಿಜೆಪಿಯ ಅಭ್ಯರ್ಥಿಯೊಬ್ಬರು ತಮ್ಮ ಗೆಲುವಿಗಾಗಿ ರಾಹುಲ್ ಗಾಂಧಿ ಬರಲಿ ಎಂದೂ ಮಾರ್ಮಿಕವಾಗಿ ಆಶಿಸಿದ್ದಾರೆ.
ನರಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ್ ಇಂದು ಗದಗದಲ್ಲಿ ಮಾತನಾಡಿ, ಕಾಂಗ್ರೆಸ್ನ ರಾಹುಲ್ ಗಾಂಧಿಯನ್ನು ವ್ಯಂಗ್ಯ ಮಾಡಿದ್ದು, ರಾಹುಲ್ ಗಾಂಧಿ ಕಾಲಿಟ್ಟು ಹೋದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯ ರಾಜ್ಯ ಪ್ರವಾಸವನ್ನು ಲೇವಡಿ ಮಾಡಿದ ಸಿ.ಸಿ.ಪಾಟೀಲ್, ಅವರು ರಾಷ್ಟ್ರದ ತುಂಬ ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಆದರೆ ಆ ಯಾತ್ರೆ ಬಳಿಕ 176 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಅದರಲ್ಲಿ ಕಾಂಗ್ರೆಸ್ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ ಎಂದರು. ರಾಹುಲ್ ಗಾಂಧಿ ಆದಷ್ಟು ಬೇಗ ಗದಗಕ್ಕೂ ಬಂದು ಹೋಗಲಿ ಎಂದಿರುವ ಅವರು, ಬಾಗಲಕೋಟೆ, ವಿಜಯಪುರ ಬಿಜೆಪಿ ಅಭ್ಯರ್ಥಿಗಳು ಪುಣ್ಯವಂತರು ಎಂದು ಹೇಳಿದ್ದಾರೆ.