ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿದಾಗ ಅಶೋಕ ಎಲ್ಲಿ ಹೋಗಿದ್ದ: DK Shivakumar ಕೆಂಡ

dk shivakumar (4)
Published on

ಬೆಂಗಳೂರು: ಚಂದ್ರಶೇಖರನಾಥ ಸ್ವಾಮೀಜಿ ಅವರು ಮುಸ್ಲಿಮರಿಗೆ ಮತದಾನದ ಹಕ್ಕು ರದ್ದು ಮಾಡಬೇಕು ಎಂದು ಮಾತನಾಡಿದ್ದು ತಪ್ಪು. ಈ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಜನತಾ ದಳದವರು ಪ್ರಕರಣ ದಾಖಲಿಸಿದಾಗ ಅಶೋಕ ಎಲ್ಲಿಗೆ ಹೋಗಿದ್ದ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(DK Shivakumar) ಹರಿಹಾಯ್ದರು.

ವಿಧಾನಸೌಧದ ಆವರಣದಲ್ಲಿ ಶನಿವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿದರು. ಸ್ವಾಮೀಜಿಯವರು ತಮ್ಮ ಹೇಳಿಕೆ ವಿಚಾರವಾಗಿ ಕ್ಷಮಾಪಣೆ ಕೇಳಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ. ಜಾತಿ, ಧರ್ಮಗಳ ವಿಚಾರಗಳಲ್ಲಿ ಪ್ರವೇಶ ಮಾಡಬಾರದು. ಮತದಾನ ಪ್ರತಿಯೊಬ್ಬ ಪ್ರಜೆಯ ಸಾಂವಿಧಾನಿಕ ಹಕ್ಕು. ಇದರಲ್ಲಿ ಯಾವ ದಾಕ್ಷಿಣ್ಯವೂ ಇಲ್ಲ ಎಂದರು.

ಈ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಮಾಜಿ ಸಚಿವ ಚನ್ನಿಗಪ್ಪ ಅವರಿಂದ ಪ್ರಕರಣ ದಾಖಲಿಸಿ, ಸ್ವಾಮೀಜಿಗಳು ಜಾಮೀನು ಪಡೆಯುವ ಸ್ಥಿತಿ ಬಂದಾಗ, ಅವರು ಹತ್ತಾರು ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಗ ಈ ಅಶೋಕ ಎಲ್ಲಿಗೆ ಹೋಗಿದ್ದ? ಬೇರೆಯವರು ಎಲ್ಲಿ ಹೋಗಿದ್ದರು? ಕಾನೂನು ಎಲ್ಲರಿಗೂ ಒಂದೇ ಅಲ್ಲವೇ ಎಂದರು.

ಬಾಲಗಂಗಾಧರನಾಥ ಸ್ವಾಮೀಜಿ ಅವರು ತಪ್ಪು ಮಾಡಿರಲಿಲ್ಲ

ಅಂದು ಬಾಲಗಂಗಾಧರನಾಥ ಸ್ವಾಮೀಜಿ ಅವರು ತಪ್ಪು ಮಾಡಿರಲಿಲ್ಲ. ಆದರೆ, ಅಂದಿನ ಜನತಾದಳ ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದು ದಾಖಲೆಗಳಲ್ಲಿದೆ, ಇದನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

 ಹಚ್ಚುವ ಕೆಲಸ ಅಶೋಕ್​ ಮಾಡುತ್ತಿದ್ದಾರೆ

ಆರ್. ಅಶೋಕ್ ಅವರು ಈ ವಿಚಾರದಲ್ಲಿ ಬೆಂಕಿ ಹಚ್ಚಿ, ಬೀಡಿ ಸೇದಲು ತೊಡಗಿದ್ದಾರೆ. ಚಂದ್ರಶೇಖರನಾಥ ಸ್ವಾಮೀಜಿ ಅವರನ್ನು ಮುಟ್ಟಿದರೆ ಒಕ್ಕಲಿಗ ಸಮಾಜ ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ ಎಂದು ಕಿಡಿಯಾದರು.

ನಾನು ಒಕ್ಕಲಿಗ ಸಮುದಾಯ ಬಳಸಿಕೊಂಡಿಲ್ಲ

ಡಿ.ಕೆ. ಶಿವಕುಮಾರ್ ಅವರು ಅವರಿಗೆ ಬೇಕಾದಾಗ ಒಕ್ಕಲಿಗ ಸಮುದಾಯ ಬಳಸಿಕೊಳ್ಳುತ್ತಾರೆ ಎನ್ನುವ ಆರ್. ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಎಂದಿಗೂ ಸಮುದಾಯವನ್ನು ಬಳಸಿಕೊಂಡಿಲ್ಲ. ನಾನು ಒಕ್ಕಲಿಗನಾಗಿ ಹುಟ್ಟಿದ್ದೇನೆ. ನಾವು ಎಲ್ಲಾ ಜಾತಿ, ಧರ್ಮಗಳಿಗೆ ಗೌರವ ಕೊಡಬೇಕು. ಸಾಂವಿಧಾನಿಕ ದೇಶದಲ್ಲಿ ಒಂದು ಧರ್ಮ, ಜಾತಿಯ ಹಕ್ಕಿನ ಬಗ್ಗೆ ಮಾತನಾಡುವುದು ಸೂಕ್ತವಲ್ಲ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net