ಭಾರತದ ಯಾವ ರಾಜ್ಯದಲ್ಲಿ ಹೆಚ್ಚಾಗಿ ಕಾಂಡೋಮ್​ ಬಳಸಲಾಗುತ್ತೆ? ಹೆಸರು ಕೇಳಿದ್ರೆ ಹುಬ್ಬೇರೋದು ಖಚಿತ!

condoms
Published on

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿ ಬಾರಿ ವರದಿಯನ್ನು ಬಿಡುಗಡೆ ಮಾಡಿದಾಗ ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆ ನಡೆಸುವ ಪ್ರವೃತ್ತಿಯು ಭಾರತದಲ್ಲಿ ಹೆಚ್ಚಾಗಿದೆ ಎಂದು ಹೇಳುತ್ತದೆ. ಇದರೊಂದಿಗೆ ಯಾವ ರಾಜ್ಯಗಳಲ್ಲಿ ಕಾಂಡೋಮ್‌ಗಳನ್ನು ಹೆಚ್ಚು ಬಳಸಲಾಗುತ್ತದೆ ಎಂಬುದನ್ನು ಸಹ ತಿಳಿಸುತ್ತದೆ. ನಿಮಗೆಲ್ಲ ಗೊತ್ತಿರಬಹುದು ಆರೋಗ್ಯ ಇಲಾಖೆಯು ಕಾಂಡೋಮ್ ಬಳಕೆ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕಾಂಡೋಮ್​ಗಳು ಲಭ್ಯವಾಗುತ್ತವೆ. ಆದರೂ ಅದರ ಬಳಕೆ ಮಾತ್ರ ಕಡಿಮೆಯಾಗುತ್ತಲೇ ಇದೆ. ಹೀಗಿರುವಾಗ ಇತ್ತೀಚೆಗೆ ಸಂಶೋಧನೆಯೊಂದು ಕಾಂಡೋಮ್​ಗಳನ್ನು ಹೆಚ್ಚು ಬಳಸುವ ರಾಜ್ಯಗಳು ಯಾವುವು ಎಂಬುದನ್ನು ತಿಳಿಸಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆ (2021-22) ನಡೆಸಿದ ಸಮೀಕ್ಷೆಯಲ್ಲಿ ದಾದ್ರಾ ನಗರ ಹವೇಲಿಯು ಭಾರತದಲ್ಲಿ ಹೆಚ್ಚು ಕಾಂಡೋಮ್‌ಗಳನ್ನು ಬಳಸುವ ಪ್ರದೇಶವಾಗಿದೆ. ಅಂದಹಾಗೆ ದಾದ್ರಾ ಮತ್ತು ನಗರ ಹವೇಲಿ ಪಶ್ಚಿಮ ಭಾರತದ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ಜಿಲ್ಲೆಯಾಗಿದೆ. ಭಾರತದ ಯಾವುದೇ ರಾಜ್ಯಕ್ಕಿಂತ ಈ ಪ್ರದೇಶದಲ್ಲಿ ಹೆಚ್ಚಿನ ಜನರು ಕಾಂಡೋಮ್‌ಗಳನ್ನು ಖರೀದಿಸುತ್ತಾರೆ. ಇದರ ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ ಬರುತ್ತದೆ. ರಾಜ್ಯದ ವಿಚಾರಕ್ಕೆ ಬಂದರೆ ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿದೆ.

ದಾದ್ರಾ ಮತ್ತು ನಗರ ಹವೇಲಿಯಲ್ಲಿ 10 ಸಾವಿರ ಜೋಡಿಯಲ್ಲಿ 993 ಜೋಡಿ ಸಂಭೋಗದ ಸಮಯದಲ್ಲಿ ಕಾಂಡೋಮ್ ಬಳಸುತ್ತಾರೆ ಎಂದು ಅಂದಾಜಿಸಲಾಗಿದೆ. ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದ್ದು, 10 ಸಾವಿರದಲ್ಲಿ 978 ಜೋಡಿ ಕಾಂಡೋಮ್ ಬಳಸುತ್ತಾರೆ. ಕರ್ನಾಟಕ 15ನೇ ಸ್ಥಾನದಲ್ಲಿದ್ದು, 10 ಸಾವಿರ ಜೋಡಿಯಲ್ಲಿ 307 ಜೋಡಿ ಮಾತ್ರ ಕಾಂಡೋಮ್ ಬಳಸುತ್ತಾರೆ.

ಪುದುಚೇರಿಯಲ್ಲಿ 10,000 ಜೋಡಿಯಲ್ಲಿ ಕೇವಲ 960, ಪಂಜಾಬ್‌ನಲ್ಲಿ 895, ಚಂಡೀಗಢದಲ್ಲಿ 822, ಹರಿಯಾಣದಲ್ಲಿ 685 ಜೋಡಿ ಸಂಭೋಗದ ಸಮಯದಲ್ಲಿ ಕಾಂಡೋಮ್ ಬಳಸುತ್ತಾರೆ. ಅದೇ ಸಮಯದಲ್ಲಿ ಹಿಮಾಚಲ ಪ್ರದೇಶದಲ್ಲಿ 567 , ರಾಜಸ್ಥಾನದಲ್ಲಿ 514 ಹಾಗೂ ಗುಜರಾತ್​ನಲ್ಲಿ 430 ಜನ ಕಾಂಡೋಮ್ ಬಳಸುತ್ತಾರೆ.

ಭಾರತದಲ್ಲಿ ಕಾಂಡೋಮ್ ಬಗ್ಗೆ ತಿಳಿಯದ ಶೇ. 6 ರಷ್ಟು ಜನರಿದ್ದಾರೆ ಎಂದು ಅದೇ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಕಾಂಡೋಮ್ ಬಗ್ಗೆ ಕೇವಲ 94% ಜನರಿಗೆ ಮಾತ್ರ ತಿಳಿದಿದೆ. ಇನ್ನು ಭಾರತದಲ್ಲಿ ಪ್ರತಿ ವರ್ಷ ಸರಾಸರಿ 33.07 ಕೋಟಿ ಕಾಂಡೋಮ್‌ಗಳನ್ನು ಖರೀದಿಸಲಾಗುತ್ತದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net