ಒಂದು ಲಕ್ಷ ರೂ. ಕರೊನಾ ಪರಿಹಾರ ಯಾವಾಗ ಕೊಡ್ತೀರಾ?: ಮೂರು ತಿಂಗಳು ಕಳೆದರೂ ಸಿಗದ ನೆರವು

Corona Compensation
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಕರೊನಾ ಸೋಂಕಿನಿಂದ ಮೃತರಾದ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿ ಬರೋಬ್ಬರಿ ನೂರು ದಿನ ಕಳೆದಿದ್ದರೂ ಈವರೆಗೆ ಪರಿಹಾರ ಕೈ ಸೇರಿಲ್ಲ. ಇದರಿಂದಾಗಿ ದುಡಿಯುವ ಯಜಮಾನನನ್ನು ಕಳೆದುಕೊಂಡು ಅತೀ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವವರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ.

ಸುಪ್ರಿಂ ಕೋರ್ಟ್ ಸೂಚನೆ, ಕೇಂದ್ರ ಸರ್ಕಾರದ ತೀರ್ವನಕ್ಕಿಂತ ಮುಂಚೆ ಈ ರೀತಿ ಪರಿಹಾರ ನೀಡಬೇಕೆಂದು ಆಶಯ ವ್ಯಕ್ತಪಡಿಸಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಜೂನ್ 14ರಂದೇ ಪರಿಹಾರದ ಘೋಷಣೆ ಮಾಡಿದ್ದರು. ‘ರಾಜ್ಯದಲ್ಲಿ ಈವರೆಗೆ ಕರೊನಾದಿಂದ 32,913 ಮಂದಿ (ಜೂ.13ರವರೆಗೆ) ಮೃತಪಟ್ಟಿದ್ದಾರೆ. ಇದರಲ್ಲಿ ಬಿಪಿಎಲ್ ವ್ಯಾಪ್ತಿಗೆ ಬರುವ ಕುಟುಂಬದಲ್ಲಿ ಒಬ್ಬರ ಸಾವಿಗೆ ಪರಿಹಾರ ನೀಡಲಾಗುವುದು. ಇದಕ್ಕಾಗಿ ಸರ್ಕಾರ 250ರಿಂದ 300 ಕೋಟಿ ರೂ. ಮೀಸಲಿಟ್ಟಿದೆ. 25 ಸಾವಿರ ಬಿಪಿಎಲ್ ಕುಟುಂಬ ವರ್ಗದವರಿಗೆ ಪರಿಹಾರ ಸಿಗಲಿದೆ’ ಎಂದು ಯಡಿಯೂರಪ್ಪ ಹೇಳಿಕೊಂಡಿದ್ದರು.

22 ದಿನಗಳ ಬಳಿಕ ಕಂದಾಯ ಇಲಾಖೆ ಈ ಸಂಬಂಧ ಆದೇಶ ಪ್ರಕಟಿಸಿ, ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯ ಮೃತಪಟ್ಟರೆ ಮಾತ್ರ ಪರಿಹಾರ ನೀಡಲಾಗುತ್ತದೆ, ಒಂದು ಕುಟುಂಬದಲ್ಲಿ ಕರೊನಾದಿಂದ ಎಷ್ಟೆ ಮಂದಿ ಮೃತಪಟ್ಟಿದ್ದರೂ ಒಬ್ಬರಿಗೆ ಮಾತ್ರ ಪರಿಹಾರ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೇ ದುಡಿಯುವ ವ್ಯಕ್ತಿಯನ್ನು ಗುರುತಿಸುವ ಮಾನದಂಡಗಳನ್ನು ಆದೇಶದಲ್ಲಿ ತಿಳಿಸಿಲ್ಲ. ಕರೊನಾದಿಂದಲೇ ಮೃತಪಟ್ಟಿದ್ದಾರೆ ಎಂದು ದೃಢೀಕರಿಸಲು ಐಸಿಎಂಆರ್ ಮಾನ್ಯತೆ ಪಡೆದ ಪರೀಕ್ಷೆಯಲ್ಲಿ ಕರೊನಾ ಸೋಂಕಿತನಾಗಿರುವುದು ದೃಢಪಟ್ಟಿರಬೇಕು. ಮನೆ ಅಥವಾ ಕರೊನಾ ಆರೈಕೆ ಕೇಂದ್ರ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಎಸ್3 ಪೋರ್ಟಲ್​ನಲ್ಲಿ ಅಪ್​ಲೋಡ್ ಮಾಡಿದ ಕರೊನಾ ಪಾಸಿಟಿವ್ ವರದಿಯನ್ನು ವೈದ್ಯರು ದೃಢೀಕರಿಸಿರಬೇಕು ಎಂದು ಹೇಳಲಾಗಿತ್ತು.

ಮುಖ್ಯಮಂತ್ರಿ ಹೇಳಿದ್ದೇನು?: ಸೆಪ್ಟೆಂಬರ್ 21ರಂದು ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರೊನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ಇನ್ನು 2-3 ದಿನಗಳಲ್ಲೇ ತಲಾ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಬೆಲೆ ಏರಿಕೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆದ ಬಳಿಕ ಉತ್ತರಿಸುವಾಗ ಈ ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಪ್ರಕ್ರಿಯೆ ನಡೆದ ಬಗ್ಗೆ ಸರ್ಕಾರದಲ್ಲಿ ಸುಳಿವಿಲ್ಲವಾಗಿದೆ.

ಪ್ರಕ್ರಿಯೆ ಹೇಗೆ? ತಡವೇಕೆ?: ಜಿಲ್ಲಾಧಿಕಾರಿ ಕರೊನಾ ಸೋಂಕಿನಿಂದ ಮೃತಪಟ್ಟಂತಹ ವ್ಯಕ್ತಿಗಳ ಸಂಪೂರ್ಣ ವಿವರಗಳನ್ನು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆಯಬೇಕು. ಜಿಲ್ಲಾ ವೈದ್ಯಾಧಿಕಾರಿಗಳು ನೀಡಿರುವ ಮೃತ ವ್ಯಕ್ತಿಗಳ ಮಾಹಿತಿಯ ಆಧಾರದ ಮೇಲೆ ಮೃತರ ಕಾನೂನು ಬದ್ಧ ವಾರಸುದಾರರನ್ನು, ಕುಟುಂಬದ ಸದಸ್ಯರನ್ನು ನಿಯಮಾನುಸಾರ ಗುರುತಿಸಿ ದೃಢಪಡಿಸಿ ನಂತರ ವಾರಸುದಾರರಿಂದ ಅಧಿಕೃತ ಬ್ಯಾಂಕ್ ವಿವರ ಪಡೆಯಬೇಕು. ಈ ಕೆಲಸ ತಡವಾಗುತ್ತಿದೆ ಎಂಬುದು ಅಧಿಕಾರಿಗಳ ವಿವರಣೆಯಾಗಿದೆ. ಜಿಲ್ಲಾಧಿಕಾರಿಯು ತಾವು ಪಡೆದ ವಿವರಗಳನ್ನು ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯಕ್ಕೆ ಕಳುಹಿಸಬೇಕು. ನಿರ್ದೇಶನಾಲಯ ಆರ್​ಟಿಜಿಎಸ್/ನೆಫ್ಟ್ ಮೂಲಕವೇ ಹಣ ವರ್ಗಾವಣೆ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿತ್ತು. ಸದ್ಯಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಎಂಟು ಸಾವಿರ ಸಂಖ್ಯೆಯಲ್ಲಿ ಮಾಹಿತಿ ಸಂಗ್ರಹ ನಡೆದಿದೆ. ಪ್ರಯೋಗಿಕವಾಗಿ ಹಣ ಹಾಕುವ ಕೆಲಸ ನಡೆದಿದೆ. ಈ ಪ್ರಕ್ರಿಯೆಗೆ ವೇಗ ನೀಡಲು ಸರ್ಕಾರ ಆಸಕ್ತಿ ತೋರಿಸದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ವಿಧಾನಸಭೆ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು. ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ, ಮಾಡಲಾಗುತ್ತಿದೆ ಎಂದು ಉತ್ತರಿಸಿದ್ದ ಸಚಿವ ಶ್ರೀರಾಮುಲು ಪ್ರತಿಪಕ್ಷದಿಂದಲೂ ತೀವ್ರ ಟೀಕೆಗೆ ಗುರಿಯಾಗಿದ್ದರು. ಕೊನೆಗೆ ಬಿ.ಎಸ್.ಯಡಿಯೂರಪ್ಪ ಅವರೇ ಮಧ್ಯ ಪ್ರವೇಶಿಸಿ, ಅಗತ್ಯ ಹಣಕಾಸು ತೆಗೆದಿರಿಸಲಾಗಿದೆ, ಈ ವರೆಗೂ ಯಾರಿಗೂ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಪ್ರತಿಪಕ್ಷವನ್ನು ತಣ್ಣಗೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net