ಭಾರತದಲ್ಲಿ ಉತ್ಪಾದನೆಯಾಗುತ್ತಾ ರಷ್ಯಾ ಲಸಿಕೆ? ಬಳಕೆಗೆ ಇನ್ನೆಷ್ಟು ದಿನ ಬೇಕು?

Russia-Vaccine-new
Published on

ನವದೆಹಲಿ: ಕರೊನಾ ಸಂಶೋಧನೆ ಲಸಿಕೆ ವಿಚಾರದಲ್ಲಿ ಮುಂಚೂಣಿ ರಾಷ್ಟ್ರಗಳನ್ನೆಲ್ಲ ರಷ್ಯಾ ಹಿಂದಿಕ್ಕಿದೆ. ತನ್ನ ದೇಶದಲ್ಲಿ ತಾನೇ ತಯಾರಿಸಿದ ಲಸಿಕೆಯನ್ನು ನೋಂದಣಿ ಮಾಡಿಸಿದೆ.

ರಷ್ಯಾ ತಾನೇ ಹೇಳಿರುವಂತೆ, ಈಗಾಗಲೇ 20 ದೇಶಗಳು 10 ಕೋಟಿ ಡೋಸ್​ಗೆ ಲಸಿಕೆಗೆ ಬೇಡಿಕೆ ಸಲ್ಲಿಸಿವೆ. ಇದರಲ್ಲಿ ಭಾರತವೂ ಸೇರಿದೆಯೇ ಎಂಬುದು ಖಚಿತವಾಗಿಲ್ಲ. ಏಕೆಂದರೆ 20 ರಾಷ್ಟ್ರಗಳು ಯಾವವು ಎಂದು ರಷ್ಯಾ ಕೂಡ ಬಹಿರಂಗಪಡಿಸಿಲ್ಲ. ಜತೆಗೆ ಭಾರತವೂ ಯಾವುದೇ ಹೇಳಿಕೆ ನೀಡಿಲ್ಲ.

ಈ ನಡುವೆ, ನೀತಿ ಆಯೋಗದ ಡಾ. ವಿ.ಕೆ ಪೌಲ್​ ನೇತೃತ್ವದಲ್ಲಿ ರಚಿಸಲಾಗಿರುವ ಕೋವಿಡ್​ ಲಸಿಕೆಯ ಕಾರ್ಯಪಡೆ ಲಸಿಕೆ ಖರೀದಿ ಹಾಗೂ ಅದರ ಬಳಕೆ ಬಗ್ಗೆ ಸಭೆ ನಡೆಸಲಿದೆ. ಸಹಜವಾಗಿಯೇ ರಷ್ಯಾದ ಬೆಳವಣಿಗೆಗಳು ಇಲ್ಲಿ ಚರ್ಚೆಯಾಗಲಿದೆ.

ಸದ್ಯ ರಷ್ಯಾ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಅಲ್ಲಿನ ಸಿಸ್ಟೆಮಾ ಕಂಪನಿ ಉತ್ಪಾದಿಸಲಿದೆ. ಈ ಕಂಪನಿಗೆ ಒಂದು ವರ್ಷಕ್ಕೆ 15 ಲಕ್ಷ ಡೋಸ್​ ಲಸಿಕೆಗಳನ್ನು ಮಾತ್ರ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ವಿದೇಶಕ್ಕಿರಲಿ ತನ್ನ ದೇಶಕ್ಕೆ ಬೇಕಿರುವ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಉತ್ಪಾದಿಸುವುದು ಇದಕ್ಕೆ ಸಾಧ್ಯವಿಲ್ಲ. ಹೀಗಾಗಿ 50 ಕೋಟಿ ಡೋಸ್​ ಉತ್ಪಾದನೆಗೆ ವಿದೇಶಗಳ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದಾಗಿ ರಷ್ಯಾ ಹೇಳಿಕೊಂಡಿದೆ.

ಈ ಲಸಿಕೆ ಭಾರತಕ್ಕೆ ಯಾವಾಗ ದೊರೆಯಲಿದೆ ಎಂಬ ಪ್ರಶ್ನೆಗೆ ಉತ್ತರಿಸುವುದಾದರೆ, ಈ ಲಸಿಕೆ ಉತ್ಪಾದನೆ ಅಥವಾ ಮಾರಾಟ ಮಾಡುವ ಕಂಪನಿ ಮೊದಲು ಭಾರತೀಯ ಔಷಧ ಮಹಾನಿಯಂತ್ರಕರಿಂದ ಅನುಮತಿ ಪಡೆಯಬೇಕಾಗುತ್ತದೆ. ಬಳಿಕ ಲಸಿಕೆಯ ಎರಡನೇ ಹಾಗೂ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ಭಾರತದಲ್ಲಿ ನಡೆಯಬೇಕು. ನಾಳೆಯೇ ಕಂಪನಿಯೊಂದು ಅನುಮತಿ ಪಡೆದುಕೊಳ್ಳಲಿದೆ ಎಂದರೂ ಈ ಪ್ರಕ್ರಿಯೆ ಮುಗಿಯಲು 2-3 ತಿಂಗಳಾದರೂ ಬೇಕು.

ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕ್ಲಿನಿಕಲ್​ ಟ್ರಯಲ್​ ನಡೆಸದೇ ಬಳಕೆಗೆ ಅನುಮತಿ ನೀಡಬಹುದು. ಆದರೆ, ಲಸಿಕೆ ಮಾನವ ಬಳಕೆಗೆ ಸುರಕ್ಷಿತ ಎಂಬುದು ಸಂದೇಹಕ್ಕೆಡೆ ಇಲ್ಲದೇ ಖಚಿತವಾಗಬೇಕು. ಹೀಗಾಗಿ ನೇರವಾಗಿ ಅನುಮತಿ ಸಿಗುವುದು ಸುಲಭವಲ್ಲ. ಇದಲ್ಲದೇ, ರಷ್ಯಾ ಕೂಡ ಲಸಿಕೆಯನ್ನು ಭಾರಿ ಪ್ರಮಾನದಲ್ಲಿ ಇನ್ನೂ ಉತ್ಪಾದನೆ ಆರಂಭಿಸಿಲ್ಲ. ಇದೀಗ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗ ನಡೆಸುತ್ತಿದೆ. ಇದಾದ ನಂತರವಷ್ಟೇ ಜಗತ್ತು ಈ ಲಸಿಕೆ ಬಗ್ಗೆ ನಂಬಿಕೆ ಬೆಳೆಸಿಕೊಳ್ಳಬಹುದು.

ಇನ್ನೊಂದು ವಿಷಯವೆಂದರೆ, ಭಾರತವು ರಷ್ಯಾದ ಮಿತ್ರರಾಷ್ಟ್ರ. ಇದಲ್ಲದೇ, ಜಗತ್ತಿನ ಶೇ.60 ಲಸಿಕೆಗಳು ಭಾರತದಲ್ಲಿಯೇ ಉತ್ಪಾದನೆಯಾಗುತ್ತವೆ. ಅತಿ ದೊಡ್ಡ ಉತ್ಪಾದನಾ ವ್ಯವಸ್ಥೆಯನ್ನು ಭಾರತ ಹೊಂದಿದೆ. ಈ ಕಾರಣಕ್ಕಾಗಿ ಭಾರತದ ಮೇಲೆ ರಷ್ಯಾ ಅವಲಂಬನೆಯಾದರೆ ಅಚ್ಚರಿಯೇನಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net