2025ರ ಚಾರ್​ಧಾಮ್​ ಯಾತ್ರೆ ಯಾವಾಗ ಶುರು; ಬದರಿನಾಥ-ಕೇದಾರನಾಥ ದೇವಾಲಯಗಳು ತೆರೆಯೋದೆಂದು? ಇಲ್ಲಿದೆ ಮಾಹಿತಿ...

dk - 2025-02-26T121251.327
Published on

2025 Chardham Yatra : ಚಾರ್​ಧಾಮ್​ ಯಾತ್ರೆ ಮಾಡುವುದರಿಂದ ಮೋಕ್ಷ ಸಾಧಿಸಲು ಸಹಾಯ ಮಾಡುತ್ತದೆ ಎಂದು ಹಿಂದು ಪುರಾಣ ಮತ್ತು ಪರಂಪರೆಯಲ್ಲಿ ನಂಬಲಾಗಿದೆ. ಹೀಗಾಗಿ, ಈ ಯಾತ್ರೆ ಆರಂಭಿಸಲು ಯುವಕರು ಸೇರಿದಂತೆ ವೃದ್ಧರು ಕೂಡ ಕಾತುರದಿಂದ ಕಾಯುತ್ತಿರುತ್ತಾರೆ. ಇದೀಗ ಚಳಿಗಾಲ ಬಹುತೇಕ ಮುಗಿದಿದ್ದು, ಬೇಸಿಗೆ ಆರಂಭವಾಗಿದ್ದರಿಂದ ಉತ್ತರ ಭಾರತದ ಪ್ರಸಿದ್ಧ ದೇವಾಲಯಗಳ ಬಾಗಿಲುಗಳು ತೆರೆದಿದೆ ಎಂದು ಅಲ್ಲಿನ ಸ್ಥಳೀಯ ಸರ್ಕಾರ ಹೇಳಿದೆ.

ಹೌದು,ಉತ್ತರಾಖಂಡದ ಕೇದಾರನಾಥ ಧಾಮದ ಬಾಗಿಲು ಯಾವಾಗ ತೆರೆಯುತ್ತದೆ ಎಂದು ಕಾಯುತ್ತಿದ್ದ ಭಕ್ತರಿಗೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಕೇದಾರನಾಥದ ಬಾಗಿಲು ಮೇ. 2ರಂದು ಬೆಳಿಗ್ಗೆ 7 ಗಂಟೆಗೆ ತೆರೆಯಲಿದೆ ಎಂದು ಹೇಳಲಾಗಿದೆ.

ಅಲ್ಲಿನ ಉಖಿಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ದಿನಾಂಕವನ್ನು ಘೋಷಿಸಲಾಯಿತು. ಈ ಸಮಯದಲ್ಲಿ, ಕೇದಾರನಾಥ ರಾವಲ್ ಭೀಮಾಶಂಕರ್ ಲಿಂಗ್ ಕೂಡ ಉಪಸ್ಥಿತರಿದ್ದರು. ಮತ್ತೊಂದೆಡೆ, ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆಗೆ ಸಿದ್ಧತೆಗಳು ತೀವ್ರಗೊಂಡಿವೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಧಿಕಾರಿಗಳೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ ಮತ್ತು ಎಲ್ಲಾ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

ಮೇ 4ರಂದು ಬದರಿನಾಥ ಧಾಮದ ಬಾಗಿಲು ತೆರೆಯಲಿದೆ. ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಇತ್ತೀಚೆಗೆ ಈ ಮಾಹಿತಿಯನ್ನು ನೀಡಿತ್ತು. ಸಾಮಾಜಿಕ ಮಾಧ್ಯಮ ಮೂಲಕ ನೀಡಲಾದ ಮಾಹಿತಿಯಲ್ಲಿ, 'ಶ್ರೀ ಬದರಿನಾಥ ಧಾಮದ ಬಾಗಿಲುಗಳು ಮೇ.4, 2025 ರಂದು ಬೆಳಿಗ್ಗೆ 6 ಗಂಟೆಗೆ ಬ್ರಹ್ಮಮುಹೂರ್ತದಲ್ಲಿ ತೆರೆಯಲ್ಪಡುತ್ತವೆ' ಎಂದು ಹೇಳಲಾಗಿದೆ.

ಇನ್ನು ಚಾರ್​ಧಾಮ್​ ಭಾರತದ ನಾಲ್ಕು ಯಾತ್ರಾ ಸ್ಥಳಗಳಾಗಿವೆ. ನಾಲ್ಕು ಧಾಮಗಳೆಂದರೆ ಬದರಿನಾಥ, ದ್ವಾರಕಾ, ಜಗನ್ನಾಥ ಮತ್ತು ರಾಮೇಶ್ವರಂ. ಪ್ರತಿಯೊಬ್ಬ ಹಿಂದೂ ತನ್ನ ಜೀವಿತಾವಧಿಯಲ್ಲಿ ಚಾರ್ ಧಾಮ್‌ಗಳಿಗೆ ಭೇಟಿ ನೀಡಬೇಕು ಎಂದು ಸನಾತನ ಧರ್ಮದಲ್ಲಿನ ನಂಬಿಕೆಯಾಗಿದೆ. ಈ ಬಾರಿ ಚಾರ್ ಧಾಮ್ ಯಾತ್ರೆ ಏ.30 ರಿಂದ (ಅಕ್ಷಯ ತೃತೀಯ) ಪ್ರಾರಂಭವಾಗಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ಕೇದಾರನಾಥ ಮತ್ತು ಬದರಿನಾಥ ಧಾಮದ ಬಾಗಿಲುಗಳನ್ನು ಮುಚ್ಚಲಾಗಿತ್ತು ಸಾಮಾನ್ಯವಾಗಿ ಚಳಿಗಾಲದಲ್ಲಿ ಎರಡೂ ದೇವಾಲಯಗಳ ಬಾಗಿಲುಗಳು ಮುಚ್ಚಿರುತ್ತವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net