

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಉಪಟಳಕ್ಕೆ ಸಾವಿರಾರು ಕುಟುಂಬಗಳು ಬೇಸತ್ತು ಮನೆ-ಮಠ ತೊರೆಯುತ್ತಿವೆ. ಕಿರುಕುಳ ತಾಳದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ವರದಿಯಾಗುತ್ತಿದ್ದು, ರಾಜ್ಯ ಸರ್ಕಾರ ಕ್ರಮವಹಿಸಿ ಸಂತ್ರಸ್ತರ ನೆರವಿಗೆ ಬರುವುದು ಯಾವಾಗ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಸಭೆ ಪ್ರತಿಪಕ್ಷ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
‘ಮನೆಹಾಳು ಮೈಕ್ರೋ ಫೈನಾನ್ಸ್’ ಶೀರ್ಷಿಕೆಯಡಿ ‘ವಿಜಯವಾಣಿ’ ಭಾನುವಾರ ಪ್ರಕಟಿಸಿದ್ದ ವರದಿಯನ್ನು ನಾಯಕರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಇದ್ದರೂ ನಿರರ್ಥಕ: ಆರ್ಬಿಐ ನಿಯಮಗಳನ್ನು ಗಾಳಿಗೆ ತೂರಿ ಮೀಟರ್ ಬಡ್ಡಿ ದಂಧೆಕೋರರ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ಜಾಲ ಸಾಲಗಾರರ ಪ್ರಾಣ ಹಿಂಡಿ ವಸೂಲಾತಿಗೆ ನಿಂತಿರುವುದು ಬಯಲಾಗಿದೆ. ವಂಚಿತರ ಪಾಲಿಗೆ ಸರ್ಕಾರ ಇದ್ದರೂ ನಿರರ್ಥಕವೆಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಮರ್ಯಾದೆಗೆ ಅಂಜಿ ಗ್ರಾಮೀಣ ಬಡವರು ಮನೆ ತೊರೆಯುತ್ತಿದ್ದಾರೆ. ಇವರ ರಕ್ಷಣೆಗೆ ಸರ್ಕಾರ ಜರೂರು ಕ್ರಮಕೈಗೊಳ್ಳಬೇಕಿದೆ. ಗೂಂಡಾಗಿರಿ ಪ್ರದರ್ಶಿಸುತ್ತಿರುವ ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಗೃಹ ಇಲಾಖೆ ಮುಂದಾಗಬೇಕು. ಕನಿಷ್ಠ ಆದಾಯದಿಂದ ಬದುಕುವವರನ್ನು ಆಯ್ದುಕೊಂಡು ಸಾಲ ನೀಡಿ, ಸಾಲದ ಚಕ್ರವ್ಯೂಹದಿಂದ ಹೊರಬರಲಾಗದ ಸ್ಥಿತಿ ನಿರ್ವಣವಾಗಿದೆ. ಫೈನಾನ್ಸ್ ದೌರ್ಜನ್ಯ ಹತ್ತಿಕ್ಕಲು ರಾಜ್ಯ ಸರ್ಕಾರ ಕ್ರಮಕೈಗೊಂಡು ಅಮಾಯಕರಿಗೆ ಅಭಯ ನೀಡಬೇಕೆಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.
ತನಿಖೆಗೆ ಜಂಟಿ ಸಮಿತಿ
ಮೈಕ್ರೋ ಫೈನಾನ್ಸ್ ಸಾಲದ ಸುಳಿಯಿಂದ ಮುಗ್ಧರನ್ನು ಪಾರು ಮಾಡಲು ಗೃಹ, ಹಣಕಾಸು ಮತ್ತು ಕಾನೂನು ಇಲಾಖೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸಬೇಕು ಎಂದು ಆರ್.ಅಶೋಕ್ ಸಲಹೆ ನೀಡಿದ್ದಾರೆ. ಸಂಸ್ಥೆಗಳಿಂದ ಸಾಲ ಪಡೆದುಕೊಳ್ಳುತ್ತಿರುವ ಬಹುತೇಕರು ಬಡವರು, ದಿನಗೂಲಿ ಕಾರ್ವಿುಕರು, ಬೀದಿ ಬದಿ ವ್ಯಾಪಾರಿಗಳು, ಕೃಷಿ ಕಾರ್ವಿುಕರು ಹಾಗೂ ಸಣ್ಣ ರೈತರೇ ಆಗಿದ್ದಾರೆ. ಕಂಪನಿಗಳ ದಬ್ಬಾಳಿಕೆ ನಿಯಂತ್ರಿಸಲು, ಕೇಂದ್ರದ ಹಣಕಾಸು ಇಲಾಖೆ ಹಾಗೂ ಆರ್ಬಿಐನೊಂದಿಗೆ ಸಿಎಂ ಸಿದ್ದರಾಮಯ್ಯ ರ್ಚಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.