

Telangana | ಪೋಷಕರಿಗೆ ತಿಳಿಯದಂತೆ ಆಟವಾಡಲು ಕಾರಿನೊಳಗೆ ಹೋದ ಇಬ್ಬರು ಸಹೋದರಿಯರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. 5 ಹಾಗೂ 4 ವರ್ಷದ ಸಹೋದರಿಯರಿಬ್ಬರು ಆಟವಾಡುವಾಗ ಅವರಿಗೆ ಕಾರಿನ ಕೀ ಸಿಕ್ಕಿದ್ದು, ಮನೆಯ ಬಳಿ ನಿಲ್ಲಿಸಿದ್ದ ಆ ಕಾರಿನೊಳಗೆ ಪ್ರವೇಶಿಸಿದಾಗ ಕಾರು ಲಾಕ್ ಆಗಿದೆ. ಬಾಗಿಲು ತೆರೆಯಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅವರ ಪೋಷಕರು ಬಂದು ನೋಡುವವರೆಗೂ ಮಕ್ಕಳು ಕಾರಿನ ಒಳಗೆ ಸಿಲುಕಿಕೊಂಡಿದ್ದರು.
ತೆಲಂಗಾಣದ ರಂಗಾರೆಡ್ಡಿಯಲ್ಲಿ ಏಪ್ರಿಲ್ 15ರಂದು ಈ ಘಟನೆ ನಡೆದಿದೆ. ತನುಶ್ರೀ, ಅಭಿನೇತ್ರಿ ಮೃತರು, ಅವರ ಪೋಷಕರು ಸಂಬಂಧಿಕರೊಬ್ಬರ ವಿವಾಹದ ಬಗ್ಗೆ ಚರ್ಚಿಸಲು ಮಕ್ಕಳನ್ನು ಕರೆದುಕೊಂಡು ಅಜ್ಜಿಯ ಮನೆಗೆ ಹೋಗಿದ್ದರು. ಚರ್ಚೆ ನಡೆಯುತ್ತಿರುವಾಗ ತನುಶ್ರೀ ಮತ್ತು ಅಭಿನೇತ್ರಿ ಹೊರಗೆ ಹೋಗಿ, ಕಾರಿನ ಬಾಗಿಲು ತೆರೆದು, ವಾಹನದೊಳಗೆ ಯಾರಿಗೂ ತಿಳಿಯದಂತೆ ಕುಳಿತಿದ್ದರು. ಅವರಿಬ್ಬರು ಕಾರಿನೊಳಗೆ ಒಂದು ಗಂಟೆಗಳೇ ಕಳೆದಿದ್ದರೂ ಯಾರೂ ಕೂಡ ಅದನ್ನು ಗಮನಿಸಿರಲಿಲ್ಲ. ಮಕ್ಕಳು ಹೊರಗೆ ಆಟವಾಡುತ್ತಿರಬಹುದೆಂದು ಪಾಲಕರು ತಿಳಿದಿದ್ದರು. ಕೆಲ ಸಮಯ ಕಳೆದರೂ ಮಕ್ಕಳು ಕಾಣದಿದ್ದಾಗ ಹೋರಗೆ ಹೋಗಿ ಕಾರನ್ನು ಪರಿಶೀಲಿಸಿದಾಗ ಪೋಷಕರಿಗೆ ಇದು ತಿಳಿದಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದಮರಗಿರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಕ್ಕಳು ಒಂದು ಗಂಟೆಗೂ ಹೆಚ್ಚು ಕಾಲ ಕಾರಿನಲ್ಲೇ ಇದ್ದರು, ಉಸಿರುಟ್ಟಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಪೋಷಕರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.