

ಬೆಂಗಳೂರು: ಬಿಜೆಪಿ ವಿಪಕ್ಷ ನಾಯಕ ಯಾರಾಗುತ್ತಾರೆ ಎಂಬ ವಿಚಾರ ಕಳೆದ ಕೆಲವು ದಿನಗಳಿಂದ ಭಾರಿ ಕುತೂಹಲ ಕೆರಳಿಸಿದ್ದು, ಆ ಕುತೂಹಲಕ್ಕೆ ಇನ್ನೇನು ತೆರೆ ಬೀಳುವ ಸಮಯ ಬಂದಾಗಿದೆ. ವಿಪಕ್ಷ ನಾಯಕರ ಘೋಷಣೆ ಯಾವಾಗ ಆಗಲಿದೆ ಎಂಬ ಕುರಿತು ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ವಿಪಕ್ಷ ನಾಯಕ ಆಯ್ಕೆ ಸಂಬಂಧ ವೀಕ್ಷಕರಾಗಿ ಕೇಂದ್ರದ ನಾಯಕರು ಆಗಮಿಸಿ ಹಿರಿಯ ನಾಯಕರ ಅಭಿಪ್ರಾಯ ತೆಗೆದುಕೊಂಡಿದ್ದಾರೆ. ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಎರಡೂ ವಿಚಾರವಾಗಿ ಅಭಿಪ್ರಾಯ ಪಡೆದಿದ್ದು, ನಾವು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಇಂದು ರಾತ್ರಿ 12 ಗಂಟೆ ಒಳಗಡೆ ವಿಪಕ್ಷ ನಾಯಕರ ಆಯ್ಕೆ ಮಾಡುವ ವಿಶ್ವಾಸ ಇದೆ ಎಂದು ಮಾಜಿ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ವಿಪಕ್ಷ ನಾಯಕರ ಆಯ್ಕೆ ಸಂಬಂಧ ವೀಕ್ಷಕರಿಂದ ಒನ್ ಟು ಒನ್ ಅಭಿಪ್ರಾಯ ಸಂಗ್ರಹ ಆರಂಭಗೊಂಡಿದೆ. ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಹಾಗೂ ವಿನೋದ್ ತಾವ್ಡೆ ವೀಕ್ಷಕರಾಗಿ ಆಗಮಿಸಿದ್ದು, ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆ ಬಳಿಕ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಭೇಟಿಗೆ ತೆರಳಿದ್ದು, ವಿನೋದ್ ತಾವ್ಡೆ ಸುದ್ದಿಗಾರರಿಗೆ 'ಅಭಿಪ್ರಾಯ ಸಂಗ್ರಹ ಮುಕ್ತಾಯ ಆಗಿದೆ' ಎಂದಷ್ಟೇ ಹೇಳಿ ಹೊರಟರು.