ಊಟಕ್ಕೂ ತತ್ವಾರವಾದಾಗ ಕಾದಂಬರಿ ಕೊಡುತ್ತಿತ್ತು ಆಹಾರ

ಏನೇನು ಅವಶ್ಯಕತೆ ಇದೆಯೋ ಭಗವಂತನೇ ಅದನ್ನು ಕೊಡುತ್ತಾನೆ. (5)
Published on

‘ತರಾಸು’ ಎಂದೇ ಜನಪ್ರಿಯರಾದ ಕನ್ನಡದ ಖ್ಯಾತ ಕಾದಂಬರಿಕಾರ ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ (1920 -1984) ಅವರ ಜನ್ಮದಿನ ಏಪ್ರಿಲ್ 21. ಮೈಸೂರಿನ ಯಾದವಗಿರಿಯಲ್ಲಿ ನೆಲೆಸಿರುವ ತರಾಸು ಪುತ್ರಿ ಟಿ.ಎಸ್.ಪೂರ್ಣಿಮಾ ಸುಂದರ್ ಅವರು ತಂದೆಯೊಂದಿಗಿನ ಬಾಲ್ಯದ ನೆನಪುಗಳನ್ನು ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಒಲೆಯ ಮೇಲೆ ನೀರಿಟ್ಟು ಪ್ರಕಾಶಕರ ಬಳಿ ಓಡಿ ಹೋಗಿ ಕಾದಂಬರಿ ಕೊಟ್ಟು ಅವರು ಕೊಟ್ಟ ಹಣದಲ್ಲಿ ಅಕ್ಕಿ ತಂದು ಊಟ ಮಾಡಿದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಅಪ್ಪ ಸರಸ್ವತಿ ಪುತ್ರರಾದರೂ, ಲಕ್ಷ್ಮೀ ಕಟಾಕ್ಷ ಇರಲಿಲ್ಲ. ತುಂಬ ಬಡತನದಲ್ಲಿಯೇ ಬೆಳೆದ ನಮಗೆ ಅಮ್ಮ ಅಂಬುಜಾನೇ ಯಜಮಾನಿ. ಅಪ್ಪ ಕೊಡುವ ಹಣದಿಂದ ಆಕೆಯೇ ಹೇಗೋ ಮನೆ ಮುನ್ನಡೆಸುತ್ತಿದ್ದರು.

ಬರವಣಿಗೆ ಬಿಟ್ಟರೆ ಅಪ್ಪ ಇನ್ನೇನು ಮಾಡುತ್ತಿರಲಿಲ್ಲ. ಬಿಡುವಿನ ಸಮಯದಲ್ಲಿ ನಮ್ಮೊಂದಿಗೆ ಮಾತಾಡುತ್ತಿದ್ದರು. ಉಳಿದಂತೆ ಎಲ್ಲ ಸಮಯವೂ ಅವರು ಓದು, ಬರಹದಲ್ಲಿಯೇ ತಲ್ಲೀನರಾಗಿ ಬಿಡುತ್ತಿದ್ದರು. ಕೊಠಡಿಗೆ ಸೇರಿಕೊಂಡರೆ ಅಪ್ಪ ದಿನಗಟ್ಟಲೇ ಬರವಣಿಗೆಯಲ್ಲಿಯೇ ತೊಡಗುತ್ತಿದ್ದರು. ಬರೆದಿದ್ದನ್ನು ಅಮ್ಮ ಅಂಬುಜಾರ ಮುಂದೆ ಓದುತ್ತಿದ್ದರು. ಹಾಗಾಗಿ ಮೊದಲ ಓದುಗರಾದ ಅಮ್ಮ, ಸಾಹಿತ್ಯ ದೃಷ್ಟಿಕೋನವನ್ನು ಹೊಂದಿದ್ದರು. ಹಾಗಾಗಿ ತಮಗೆ ಅನಿಸಿದ್ದನ್ನು ಹೇಳುವ, ಕರಡು ತಿದ್ದುವ ಕೆಲಸ ಮಾಡುತ್ತಿದ್ದರು.

ಅಪ್ಪ, ಅಮ್ಮನದು ಅನ್ಯೋನ್ಯ ದಾಂಪತ್ಯ, ಇಬ್ಬರು ಸೇರಿಕೊಂಡರೆ ದಿನಗಟ್ಟಲೇ, ರಾತ್ರಿ ಇಡೀ ಮಾತುಕತೆಯಲ್ಲಿ ಮುಳುಗಿರುತ್ತಿದ್ದರು. ಹೊರಗೆ ಯಾವುದಾದರೂ ಸಭೆ, ಸಮಾರಂಭ, ಸಮ್ಮೇಳನಕ್ಕೆ ಹೋಗಬೇಕಾದರೆ ಅಪ್ಪ, ಅಮ್ಮ ಇಬ್ಬರೇ ಹೋಗುತ್ತಿದ್ದರು. ನನ್ನ ಅಣ್ಣ ಟಿ.ಎಸ್.ನಾಗಪ್ರಸಾದ್, ತಮ್ಮ ಟಿ.ಎಸ್. ಪ್ರದೀಪ್​ಕುಮಾರ್ (ಈಗ ಅವರಿಬ್ಬರೂ ಇಲ್ಲ), ನಾನು ಮನೆಯಲ್ಲಿಯೇ ಇರುತ್ತಿದ್ದೆವು.

ಊಟಕ್ಕಾಗಿಯೇ ಕಾದಂಬರಿ ಬರೆದಿದ್ದೂ ಇದೆ: ಮನೆಯಲ್ಲಿ ಏನೂ ಇರುತ್ತಿರಲಿಲ್ಲ. ಅಂಥ ದಿನಗಳಲ್ಲಿ ಬರವಣಿಗೆಯೇ ನಮ್ಮನ್ನು ಕೈ ಹಿಡಿದಿದ್ದು. ಈಗಿನಂತೆ ಪುಸ್ತಕಗಳಿಗೆ ಆಗ ರಾಯಲ್ಟಿ ಕೊಡುತ್ತಿರಲಿಲ್ಲ. ಹೊಸ, ಹೊಸ ಪುಸ್ತಕ ಬರೆದು ಅದನ್ನು ಪ್ರಕಾಶಕರಿಗೆ ಕೊಡಬೇಕಿತ್ತು. ಅದಕ್ಕೆ ಅವರು ಒಂದಷ್ಟು ದುಡ್ಡು ಕೊಡುತ್ತಿದ್ದರು. ಆ ಹಣವೇ ಮನೆಗೆ ಆಧಾರವಾಗಿತ್ತು. ಒಮ್ಮೊಮ್ಮೆ ಮನೆಯಲ್ಲಿ ಏನೂ ಇಲ್ಲದಿದ್ದಾಗ ಅಪ್ಪ ರೂಮಿನಲ್ಲಿ ಕೂತು ಒಂದೇ ದಿನದಲ್ಲಿ ಕಾದಂಬರಿ ಬರೆದು ಮುಗಿಸುತ್ತಿದ್ದರು. ಹೀಗೆ ಬರೆದು ಮುಗಿಸಿದ ಪ್ರತಿಯನ್ನು ಹಿಡಿದು ಪ್ರಕಾಶಕರ ಬಳಿ ತೆರಳಿ ಅವರಿಂದ ಹಣ ಪಡೆದು ಮನೆಗೆ ಬೇಕಾದ ಸಾಮಾನು ತರುತ್ತಿದ್ದರು. ಅವರು ಬರುವ ವೇಳೆಗೆ ಅಮ್ಮ ಒಲೆ ಮೇಲೆ ನೀರಿಟ್ಟು ಕಾಯುತ್ತಿದ್ದರು. ಅಪ್ಪ ಬಂದ ಮೇಲೆ ಅಡುಗೆ ಮಾಡಿ ಊಟ ಮಾಡುತ್ತಿದ್ದ ದಿನಗಳು ಈಗಲೂ ಕಣ್ಣಮುಂದಿವೆ.

ಚಿತ್ರರಂಗದ ಒಡನಾಟವೂ ಇತ್ತು: ಅಪ್ಪನ ಸುಮಾರು 12ಕ್ಕೂ ಹೆಚ್ಚು ಕಾದಂಬರಿಗಳು ಚಲನಚಿತ್ರಗಳಾಗಿವೆ. ಹೀಗಾಗಿ ಅಪ್ಪನಿಗೆ ಚಿತ್ರರಂಗದ ಒಡನಾಟ ಇತ್ತು. ‘ನಾಗರಹಾವು’ ಚಿತ್ರ ತೆರೆ ಕಂಡಾಗ ಅಪ್ಪನಿಗೆ ಬೇಸರವಾಗಿತ್ತು. ‘ನನ್ನ ಮೂಲ ಕಾದಂಬರಿಯ ರೀತಿ ಚಿತ್ರ ಮೂಡಿಬರಲಿಲ್ಲ’ ಎನ್ನುವ ಅಸಮಾಧಾನ ಹೊರಹಾಕಿ ಚಲನಚಿತ್ರ ಮಾಡಲು ಕಾದಂಬರಿ ಕೊಡುವುದಿಲ್ಲ ಎನ್ನುವ ನಿರ್ಧಾರ ಮಾಡಿದ್ದರು. ಆ ಬಳಿಕ ಪುಟ್ಟಣ್ಣ ಕಣಗಾಲ್ ಸಂಧಾನ ಮಾಡಿಕೊಂಡ ಮೇಲೆ ‘ಮಸಣದ ಹೂ’ ಸೇರಿದಂತೆ ಹಲವು ಕಾದಂಬರಿಗಳನ್ನು ಚಿತ್ರ ಮಾಡಲು ಅನುಮತಿ ನೀಡಿದ್ದರು. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಚಿತ್ರರಂಗದ ಹಲವರು ನಮ್ಮ ಮನೆಗೆ ಬರುತ್ತಿದ್ದರು. ಪ್ರೀಮಿಯರ್ ಸ್ಟುಡಿಯೋದಲ್ಲಿ ಚಿತ್ರೀಕರಣ ಇದ್ದಾಗ ಡಾ.ರಾಜಕುಮಾರ್ ಮನೆಗೆ ಬಂದು ತಾಸುಗಟ್ಟಲೇ ಅಪ್ಪನೊಂದಿಗೆ ರ್ಚಚಿಸುತ್ತಿದ್ದರು. ಆಗ ಅಮ್ಮ 20ರಿಂದ 25 ಜನರಿಗೆ ಹೇಗೋ ಹೊಂದಿಸಿ ಸೌದೆ ಒಲೆಯಲ್ಲಿ ಅಡುಗೆ ಮಾಡಿ ಊಟ ಬಡಿಸುತ್ತಿದ್ದರು. ವಿಷ್ಣುವರ್ಧನ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು, ಬಂಗಾರಪ್ಪ ಸೇರಿದಂತೆ ಅನೇಕ ರಾಜಕಾರಣಿಗಳು ಕೂಡ ಆಗಾಗ್ಗೆ ಮನೆಗೆ ಬರುತ್ತಿದ್ದುದ್ದನ್ನು ಹತ್ತಿರದಿಂದ ಕಂಡಿದ್ದೇನೆ.

ಪ್ರಶಸ್ತಿ ಪಡೆಯಲು ಅಪ್ಪನೇ ಇರಲಿಲ್ಲ: ಚಿತ್ರದುರ್ಗದ ಇತಿಹಾಸದ ಮೇಲೆ ಐತಿಹಾಸಿಕ ಕಾದಂಬರಿಗಳು, ಸಾಮಾನ್ಯ ಜನಜೀವನ ಕುರಿತ ಸಾಮಾಜಿಕ ಕಾದಂಬರಿಗಳು ಮತ್ತು ನಾಟಕಗಳನ್ನು ಅವರು ರಚಿಸಿದ್ದರು. ಅವರ ‘ದುರ್ಗಾಸ್ತಮಾನ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಅದನ್ನು ಪಡೆಯಲು ಅಪ್ಪ ಇರಲಿಲ್ಲ. ಅಪ್ಪ ಕಾಫಿಪ್ರಿಯರಾಗಿದ್ದರು. ಕೊನೆಯ ದಿನಗಳಲ್ಲಿ ಮದ್ಯ ಬಿಟ್ಟಿದ್ದರೂ, ಸಿಗರೇಟ್​ಗೆ ಅಂಟಿಕೊಂಡಿದ್ದರು. ಹೃದಯಾಘಾತವಾದಾಗ ಕಡಿಮೆ ಮಾಡಿದರು. ಆಗ ಅಮ್ಮನೊಂದಿಗೆ ಪ್ರಭಾಕರ್ ಸಹಾಯಕರಾಗಿ ಅಪ್ಪ ಹೇಳಿದ್ದನ್ನು ಬರೆದುಕೊಡುತ್ತಿದ್ದರು. ಅಪ್ಪ ನಿಧನದ ಬಳಿಕ ಅರ್ಧಕ್ಕೆ ನಿಂತಿದ್ದ ‘ಚಕ್ರೇಶ್ವರಿ ಭಾಗ-2’ ಅನ್ನು ಅಮ್ಮ ಹಾಗೂ ಪ್ರಭಾಕರ್ ಪೂರ್ಣಗೊಳಿಸಿದರು.

ಅವರು ಬರೆದಿದ್ದ ‘ಹಂಸಗೀತೆ’ ಹಿಂದಿ ಭಾಷೆಯ ಚಲನಚಿತ್ರ ‘ಬಸಂತ್ ಬಹಾರ್’ಗೆ ವಸ್ತುವಾಗಿತ್ತು. ಅದೇ ಕೃತಿಯನ್ನು ಬೆಂಗಳೂರಿನ ಪ್ರಮೋದ್ ಮುತಾಲಿಕ್ ಅವರು ಇಂಗ್ಲಿಷ್​ಗೆ ತರ್ಜುಮೆ ಮಾಡಿದ್ದರು. ಶಾ.ಮಂ. ಕೃಷ್ಣರಾಯ ಅವರ ಪ್ರಯತ್ನದ ಫಲವಾಗಿ ಕನ್ನಡ ಸಾಹಿತ್ಯ ಅಕಾಡೆಮಿ ತರಾಸು ಅವರ ಸಮಗ್ರ ಸಾಹಿತ್ಯವನ್ನು ಹೊರ ತರುವ ಕೆಲಸ ಮಾಡುತ್ತಿದೆ. ಈಗ ಐದು ಸಂಪುಟಗಳನ್ನು ಕೃಷ್ಣರಾಯರು ಸಂಪಾದಿಸಿದ್ದು, ಪ್ರಕಟಗೊಂಡಿವೆ. ಮುಂದೆ ಅವರ ಹೆಸರು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ತರಾಸು ಪ್ರತಿಷ್ಠಾನ ಸ್ಥಾಪಿಸುವಂತೆ ಸರ್ಕಾರವನ್ನು ಕೋರಲಾಗಿದೆ. ಆದರೆ ಸೂಕ್ತ ಸ್ಪಂದನೆ ದೊರೆತಿಲ್ಲ. ಸರ್ಕಾರ ಈಗಲಾದರೂ ಮನಸ್ಸು ಮಾಡಬೇಕಿದೆ.

ನಿರೂಪಣೆ: ಆರ್.ಕೃಷ್ಣ, ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net