

ತ್ರಿಶ್ಶೂರ್: ಪ್ರತಿ ಮನೆಯ ನಳದಲ್ಲೂ ಸಾರಾಯಿ ಹರಿಯುವಂತೆ ಮಾಡುತ್ತೇವೆ ಎಂಬ ವ್ಯಂಗ್ಯದ ಮಾತು ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರ ಭಾಷಣ ಕೇಳುವಾಗ ಜನಸಾಮಾನ್ಯನ ಬಾಯಿಯಲ್ಲಿ ಹರಿದಾಡುವುದು ಸಹಜ, ಸರ್ವೇ ಸಾಮಾನ್ಯ. ಆದರೆ, ಆ ಮಾತು ನಿಜವಾದರೆ!
ಹೌದು, ಇಂಥದ್ದೊಂದು ವಿಲಕ್ಷಣ ಸನ್ನಿವೇಶ ಕೇರಳದ ಚಾಲಕ್ಕುಡಿ ಪಟ್ಟಣದಲ್ಲಿ ನಡೆದಿದೆ. ಇಡೀ ಪಟ್ಟಣದ ನಿವಾಸಿಗಳಿಗೆ ಅಂಥ ಭಾಗ್ಯ ಸಿಗಲಿಲ್ಲ, ಬಿಡಿ. ಒಂದು ಅಪಾರ್ಟ್ಮೆಂಟ್ನ 18 ಮನೆಗಳಲ್ಲಿ ಪ್ರತಿಮನೆಯ ನಳದಲ್ಲೂ ಸೋಮವಾರ ನೀರಿನ ಬದಲು ಮದ್ಯ ಹರಿಯ ತೊಡಗಿತ್ತು!
ಅಂಥ ಅದೃಷ್ಟ ಅವರಿಗೆ ಹೇಗೆ ಸಿಕ್ಕಿತು ಎಂದು ಹುಬ್ಬೇರಿಸಬೇಡಿ. ನಡೆದುದು ಇಷ್ಟು- ಅಬಕಾರಿ ಅಧಿಕಾರಿಗಳು ವಿವಿಧ ಬ್ರಾಂಡುಗಳ 450 ಪೆಟ್ಟಿಗೆ ಭಾರತದಲ್ಲೇ ಉತ್ಪಾದಿಸಿದ ವಿದೇಶಿ ಮದ್ಯದ ಬಾಟಲಿಗಳನ್ನು ವಶಪಡಿಸಿದ್ದರು. ಕೋರ್ಟ್ ನಿರ್ದೇಶನದ ಪ್ರಕಾರ ಅವರು ಅದನ್ನು ನಾಶಪಡಿಸಿದ್ದು ಇದೇ ಅಪಾರ್ಟ್ಮೆಂಟ್ ಸಮೀಪದ ಬಯಲು ಪ್ರದೇಶದಲ್ಲಿ. ಅಲ್ಲೊಂದು ಬಾವಿ ಇತ್ತು. ಅದರ ನೀರಿನ ಜತೆಗೆ ಈ ಮದ್ಯ ಹೋಗಿ ಸೇರಿಕೊಂಡಿದೆ.
ಆ ಬಾವಿಯ ನೀರನ್ನು ಈ ಅಪಾರ್ಟ್ಮೆಂಟ್ ನಿವಾಸಿಗಳು ಬಳಸುತ್ತಿದ್ದರು. ಸೋಮವಾರ ಬೆಳಗ್ಗೆ ಎಲ್ಲರಿಗೂ ಶಾಕ್! ನೀರಿನ ಬದಲು ನಳದಲ್ಲಿ ಮದ್ಯ ಹರಿಯ ತೊಡಗಿದಾಗ ಎಲ್ಲ ಹದಿನೆಂಟು ಕುಟುಂಬದವರೂ ಬೀದಿಗೆ ಬಂದು ಕೋಲಾಹಲವೇ ಸೃಷ್ಟಿಯಾಗಿತ್ತು. ಬಾವಿ ಬಳಿ ಹೋಗಿ ಗಮನಿಸಿದಾಗ ವಸ್ತು ಸ್ಥಿತಿ ಎಲ್ಲರಿಗೂ ಅರಿವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಅಧಿಕಾರಿಗಳು, ಆರು ವರ್ಷಗಳ ಹಿಂದೆ ಇರಿಂಜಾಲಕುಡದಲ್ಲಿನ ಬಾರ್ ಒಂದರಿಂದ 2,200 ಲೀಟರ್ ಮದ್ಯವನ್ನು ವಶಪಡಿಸಲಾಗಿತ್ತು. ಅದನ್ನು ಇಲ್ಲಿ ನಾಶ ಮಾಡುವ ವೇಳೆ ಅದರಿಂದ ಇಷ್ಟೆಲ್ಲ ರಾದ್ಧಾಂತ ಆಗಬಹುದು ಎಂದು ನಾವ್ಯಾರೂ ಊಹಿಸಿರಲಿಲ್ಲ. ಸದ್ಯ ಈ ಅಪಾರ್ಟಮೆಂಟ್ ನಿವಾಸಿಗಳ ಅನುಕೂಲಕ್ಕಾಗಿ 5,000 ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್ ಒದಗಿಸಿದ್ದು, ನೀರು ಕೂಡ ಪೂರೈಸಿದ್ದೇವೆ. ಈಗ ಬಾವಿಯನ್ನು ಸ್ವಚ್ಛಗೊಳಿಸುವ ಕೆಲಸ ಮುಂದುವರಿದಿದೆ ಎಂದಿದ್ದಾರೆ. (ಏಜೆನ್ಸೀಸ್)