

ನವದೆಹಲಿ: ಬ್ರಿಟನ್ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದಡಿ ಬ್ರಿಟನ್ನಿನ ಹಲವಾರು ಗೃಹೋಪಯೋಗಿ ಉತ್ಪನ್ನಗಳಿಗೆ ಸುಂಕ ರಿಯಾಯಿತಿ ನೀಡಿದೆ. ಪೇಸ್ಟ್ರಿಗಳು, ಸಾಕು ಪ್ರಾಣಿಗಳ ಆಹಾರ, ಸೌಂದರ್ಯವರ್ಧಕಗಳು, ಮೈಕ್ರೋವೇವ್ ಓವನ್, ಕೇಕ್ಗಳು, ಪೊ›ಟೀನ್ ಕಾನ್ಸೆಂಟ್ರೇಟ್ಗಳು, ಸಾಬೂನು, ಶೇವಿಂಗ್ ಕ್ರೀಮ್ ಡಿಟರ್ಜೆಂಟ್ಗಳು, ಏರ್ಕಂಡಿಷನರ್, ವಾಷಿಂಗ್ ಮಷಿನ್ಗೂ ಸುಂಕ ಇರುವುದಿಲ್ಲ.
ಯುಕೆಯಿಂದ ಬರುವ ಸುಮಾರು ಶೇ. 90ರಷ್ಟು ಸರಕುಗಳ ಮೇಲಿನ ಆಮದು ಸುಂಕ ಕಡಿಮೆ ಮಾಡಲು ಅಥವಾ ತೆಗೆದುಹಾಕಲು ಭಾರತ ಒಪ್ಪಿಕೊಂಡಿದೆ. ಆದರೆ, ಯಾವುದೇ ಸುಂಕ ಒಮ್ಮೆಲೇ ಶೂನ್ಯಕ್ಕೆ ಇಳಿಯುವುದಿಲ್ಲ. ಯುಕೆ ಕಂಪನಿಗಳಿಂದ ಎದುರಾಗಲಿರುವ ಸ್ಪರ್ಧೆಗೆ ಭಾರತೀಯ ಕೈಗಾರಿಕೆಗಳು ಸಿದ್ಧವಾಗುವುದಕ್ಕಾಗಿ ಸಮಯ ನೀಡುವ ಉದ್ದೇಶದಿಂದ ಸುಂಕ ರಿಯಾಯಿತಿಗಳನ್ನು ಹಂತಹಂತವಾಗಿ ಜಾರಿಗೊಳಿಸಲಾಗುತ್ತದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿಟಿಆರ್ಐ) ವಿಶ್ಲೇಷಣೆ ತಿಳಿಸಿದೆ. ಚಹಾ, ಕಾಫಿ, ಚಿನ್ನದಂತಹ ಸೂಕ್ಷ್ಮ ವಲಯಗಳನ್ನು ಒಪ್ಪಂದದಿಂದ ಹೊರಗಿಡಲಾಗಿದೆ. ಕಾಫಿ, ಚಹಾ, ಸಾಸೇಜ್ಗಳ ಮೇಲೆ ಭಾರತ ಶೇ. 110ರಷ್ಟು ಭಾರೀ ಸುಂಕ ವಿಧಿಸುತ್ತದೆ. ಈ ವಸ್ತುಗಳನ್ನು ಸುಂಕ ರಿಯಾಯಿತಿಯಿಂದ ಹೊರಗೆ ಇಟ್ಟಿರುವುದು ದೇಶೀಯ ರೈತರು ಮತ್ತು ಆಹಾರ ಸಂಸ್ಕರಣ ಉದ್ಯಮಗಳನ್ನು ರಕ್ಷಿಸುವ ಭಾರತದ ಪ್ರಯತ್ನಕ್ಕೆ ಸಾಕ್ಷಿಯಾಗಿದೆ ಎಂದು ಜಿಟಿಆರ್ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.