

ಬೆಂಗಳೂರು: ಹುಟ್ಟಹಬ್ಬದ ಖುಷಿಯಲ್ಲಿ ಗಾಂಜಾ ಸೇವಿಸಿ ವ್ಹೀಲಿಂಗ್‌ಮಾಡಿದ ಯುವಕ, ಪೊಲೀಸರ ಅತಿಥಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.
ಕಾಮಾಕ್ಷಿಪಾಳ್ಯ ನಿವಾಸಿ ಚಂದನ್‌ಗೌಡ (19) ಬಂಧಿತ. ಬುಧವಾರ ಮಧ್ಯಾಹ್ನ 1 ಗಂಟೆಯಲ್ಲಿ ಸುಂಕದಕಟ್ಟೆ ಶಾಂತಿಧಾಮ ಜಂಕ್ಷನ್‌ನಲ್ಲಿ ಹೊಂಡಾ ಡಿಯೋ ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡಿಕೊಂಡು ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾಗುವಂತೆ ಬರುತ್ತಿದ್ದ. ಅಲ್ಲಿಯೇ ನಿಂತಿದ್ದ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನೋಡಿ ಮದ್ಯದ ಬೆರಳನ್ನು ಮೇಲಕ್ಕೆ ಎತ್ತಿ ಅಸಭ್ಯ ವರ್ತನೆ ತೋರುತ್ತಿದ್ದ.
ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಅವಿನಾಶ್‌ಗೂ ಅಸಭ್ಯವಾಗಿ ವರ್ತಿಸಿ ವ್ಹೀಲಿಂಗ್ ಮಾಡಿಕೊಂಡು ಮುಂದೆ ಸಾಗಿದ್ದ. ಎಚ್ಚೆತ್ತ ಎಎಸ್‌ಐ ಶಿವಶಂಕರ್, ಕಾನ್‌ಸ್ಟೆಬಲ್ ಅವಿನಾಶ್ ತಕ್ಷಣ ಆರೋಪಿಯನ್ನು ಬೆನ್ನತ್ತಿ ಹಿಡಿದು ಸ್ಕೂಟರ್ ಜಪ್ತಿ ಮಾಡಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಗೆ ಕರೆತಂದು ಮೊಬೈಲ್ ಪರಿಶೀಲನೆ ನಡೆಸಿದಾಗ ವ್ಹೀಲಿಂಗ್ ಮಾಡಿರುವ ದೃಶ್ಯಗಳು ಪತ್ತೆಯಾಗಿವೆ.
ಇನ್‌ಸ್ಪೆಕ್ಟರ್ ಎಸ್.ಟಿ. ಯೋಗೇಶ್ ಆರೋಪಿಯನ್ನು ವಿಚಾರಣೆ ನಡೆಸಿದಾಗ ಬರ್ತ್ ಡೇ ಎಂದು ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಆದರಿಂದ ಕಾಮಾಕ್ಷಿಪಾಳ್ಯ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗೆ ಆರೋಪಿಯನ್ನು ಒಪ್ಪಿಸಿ ಮುಂದಿನ ಕ್ರಮಕ್ಕೆ ಮನವಿ ಮಾಡಿದ್ದಾರೆ.