ಸಿನಿಮಾ ನಿರ್ಮಾಪಕನಿಗೆ ಚಕ್ರಬಡ್ಡಿ ಕಾಟ

puskar
Published on

ಬೆಂಗಳೂರು: ಸಿನಿಮಾ ನಿರ್ಮಾಣಕ್ಕೆ ಪಡೆದಿದ್ದ ಸಾಲಕ್ಕೆ ಚಕ್ರಬಡ್ಡಿ ನೀಡಬೇಕೆಂದು ಪ್ರಾಣ ಬೆದರಿಕೆವೊಡ್ಡಿರುವುದಾಗಿ ಸಾಲಗಾರರ ವಿರುದ್ಧ ಸಿನಿಮಾ ನಿರ್ಮಾಪಕ, ‘ಪುಷ್ಕರ್ ಫಿಲ್ಮಂ’ ಮಾಲೀಕ ಎಂ. ಪುಷ್ಕರ್ ದೂರು ಸಲ್ಲಿಸಿದ್ದಾರೆ.

ಬಸವೇಶ್ವರನಗರ ಯಶೋಧರ ಕಾಂಪ್ಲೆಕ್ಸ್‌ನಲ್ಲಿರುವ ಪುಷ್ಕರ್, ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಸಂಘಗಳ ನೋಂದಣಾಧಿಕಾರಿ ಕಚೇರಿಗೆ ದುಬಾರಿ ಬಡ್ಡಿ ವಸೂಲಿ ಸಂಬಂಧ ದೂರು ಸಲ್ಲಿಸಿದ್ದರು. ಈ ದೂರು ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದು, ಇದರ ಮೇರೆಗೆ ಯಲಹಂಕದ ನಾಗಾರ್ಜುನ ಮೀಡೋಸ್ ನಿವಾಸಿಗಳಾದ ಡಿ.ಬಿ. ಆದರ್ಶ, ಸಿ. ಹರ್ಷ, ಶೀವು ಮತ್ತು ಡಿ.ಬಿ. ಹರ್ಷ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪುಷ್ಕರ್ ಫಿಲ್ಮಂ ಮಾಲೀಕತ್ವದಲ್ಲಿ 2014ರಿಂದ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’ ಸೇರಿ 12 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ಕೋವಿಡ್ ಕಾಲದಲ್ಲಿ ನಷ್ಟ ಉಂಟಾಗಿ 2019ರಲ್ಲಿ ಡಿ.ಬಿ. ಆದರ್ಶ ಬಳಿ 5 ಲಕ್ಷ ರೂ.ಗಳಿಂದ 5 ಕೋಟಿ ರೂ. ವರೆಗೂ ಸಾಲ ಪಡೆದಿದ್ದೇನೆ. ಪ್ರತಿ ತಿಂಗಳು ಶೇ.5 ಬಡ್ಡಿಯನ್ನು ನಗದು ರೂಪದಲ್ಲಿ ಪಾವತಿಸಿದ್ದೇನೆ. ಸಾಲದ ಭದ್ರತೆಗೆ 10 ಖಾಲಿ ಚೆಕ್‌ಗಳನ್ನು ಪಡೆದಿದ್ದರು. ಇದುವರೆಗೂ ಆದರ್ಶ ಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ಅಸಲು ಮತ್ತು ಬಡ್ಡಿ ಸೇರಿ 11.50 ಕೋಟಿ ರೂ. ಜಮೆ ಮಾಡಿದ್ದೇನೆ. ಆದರೂ ಇಲ್ಲಿಯವರೆಗೂ ಕೊಟ್ಟಿರುವುದು ಬಡ್ಡಿಗೆ ಸರಿಹೋಗಿದೆ. ಚಕ್ರಬಡ್ಡಿ ಸೇರಿ 13 ಕೋಟಿ ರೂ. ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಇದಕ್ಕೆ ಒಪ್ಪದೆ ಇದ್ದಾಗ ಆದರ್ಶ, ಹರ್ಷ ಮತ್ತು ಆತನ ಸಹಚರರು ಮನೆ ಮತ್ತು ಕಚೇರಿ ಬಳಿಗೆ ಬಂದು ನಿಂದನೆ ಮಾಡಿ ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರಿನಲ್ಲಿ ಪುಷ್ಕರ್ ಉಲ್ಲೇಖಿಸಿದ್ದಾರೆ.

ಸಹಕಾರ ಇಲಾಖೆಯಿಂದ ಲೇವಾದೇವಿ ವ್ಯವಹಾರ ಮಾಡಲು ಪರವಾನಗಿ ಪಡೆಯದೆ ಆದರ್ಶ ಮತ್ತು ಹರ್ಷ ಸಾಲ ಕೊಟ್ಟು ಭದ್ರತೆಗಾಗಿ ಖಾಲಿ ಚೆಕ್ ಪಡೆದು ಮತ್ತು ಮಾಸಿಕ ಶೇ. 5ರಿಂದ 15 ಬಡ್ಡಿ ವಸೂಲಿ ಮಾಡುತ್ತಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಆರೋಪಿತರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net