ಕೈ ಶಾಸಕರಿಬ್ಬರ ನಡುವೆ ವ್ಯಾಟ್ಸಆ್ಯಪ್​ ವಾರ್​

klr war
ಭೈರತಿ ಸುರೇಶ್​, ಕೆ.ವೈ.ನಂಜೇಗೌಡ, ಎಸ್​.ಎನ್​.ನಾರಾಯಣಸ್ವಾಮಿ
Published on

ಕೋಲಾರ: ಜಿಲ್ಲೆಯ ಕೋಲಾರ ಹಾಲು ಒಕ್ಕೂಟದ ವಿಚಾರವಾಗಿ ಇಬ್ಬರು ಶಾಸಕರ ನಡುವೆ ವ್ಯಾಟ್ಸಆ್ಯಪ್​ ವಾರ್​ ನಡೆಯುತ್ತಿದ್ದು, ಇದು ಸಾರ್ವಜನಿಕರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕೋಲಾರ&ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಹಾಗೂ ಹಾಲು ಒಕ್ಕೂಟದ ಚುನಾವಣೆಯ ದಿನಾಂಕ ನಿಗದಿಯಾಗಿದ್ದು, ಎರಡೂ ಸಂಸ್ಥೆಗಳ ವಿಚಾರವಾಗಿ ಸ್ವ ಪಕ್ಷದ ಶಾಸಕರಿಬ್ಬರ ನಡುವೆ ಆರೋಪ &ಪ್ರತ್ಯಾರೋಪ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಭಾನುವಾರ ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಅವರಿಗೆ ವ್ಯಾಟ್ಸಆ್ಯಪ್​ ಮೂಲಕ ಸಂದೇಶ ಕಳುಹಿಸಿ, ಅದರಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ಆರೋಪ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಎಸ್​.ಎನ್​.ನಾರಾಯಣಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಕೋಮುಲ್​ ವಿಚಾರವನ್ನು ಎಸ್​.ಎನ್​.ನಾರಾಯಣಸ್ವಾಮಿ ಹಾಗೂ ಡಿಸಿಸಿ ಬ್ಯಾಂಕ್​ಅನ್ನು ಕೆ.ವೈ.ನಂಜೇಗೌಡ ಪ್ರತಿಷ್ಠೆಯಾಗಿಸಿಕೊಂಡಿದ್ದು, ಇಷ್ಟು ದಿನ ಇಬ್ಬರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಒಕ್ಕೂಟದ ಸಾಮಾನ್ಯ ಸಭೆಯ ನಂತರ ಮತ್ತಷ್ಟು ಸ್ಫೋಟಗೊಂಡಿದೆ.

ಒಕ್ಕೂಟದ ಎದುರು ಧರಣಿ ಎಚ್ಚರಿಕೆ

ಬಂಗಾರಪೇಟೆ: ಕೋಮುಲ್​ನಲ್ಲಿ ರೈತರಿಗೆ, ಮಹಿಳೆಯರಿಗೆ ಅನ್ಯಾಯವಾಗಿದ್ದು, ಇದರ ವಿರುದ್ಧ ಧರಣಿ ನಡೆಸಲಾಗುವುದು ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಂಗಾರಪೇಟೆ ಕ್ಷೇತ್ರದಲ್ಲಿ ಒಕ್ಕೂಟವಿದ್ದು, ಮತ ಕ್ಷೇತ್ರ ವಿಂಗಡಣೆ ಮಾಡಬೇಕಾದರೆ ಹಿಂದಿನ ಅಧ್ಯಕ್ಷರಾಗಿದ್ದವರು, ಅಧಿಕಾರಿಗಳು, ಎಸಿ ಡಾ.ಮೈತ್ರಿ ಯಾರೂ ಕೂಡ ಸೌಜನ್ಯಕ್ಕೂ ಶಾಸಕರನ್ನು ಕೇಳಲಿಲ್ಲ, ಇಷ್ಟ ಬಂದ ರೀತಿ ಅವರ ಅನುಕೂಲಕ್ಕಾಗಿ ಮತ ಕ್ಷೇತ್ರವಾಗಿ ಮಾಡಿಕೊಂಡು ಕ್ಷೇತ್ರವನ್ನು ಮೂರು ಭಾಗಗಳನ್ನಾಗಿ ಮಾಡಿದ್ದಾರೆ ಎಂದು ದೂರಿದರು.

ಕೋಲಾರ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್​ ಚುನಾವಣೆ ನಿಗದಿಯಾಗಿದ್ದು, ಈ ಸಂಬಂಧ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್​.ಸುರೇಶ್​ ದೂರವಾಣಿ ಕರೆ ಮಾಡಿ ಸಭೆಗೆ ಆಗಮಿಸಲು ತಿಳಿಸಿದ್ದಾರೆ. ಆದರೆ, ಸಚಿವರು ಸುಮಾರು ನಾಲ್ಕು ತಿಂಗಳಿಂದ ಕೋಮುಲ್​ ವಿಚಾರ, ಒಂದು ವರ್ಷಕ್ಕೂ ಮೇಲ್ಪಟ್ಟು ಡಿಸಿಸಿ ಬ್ಯಾಂಕ್​ ವಿಚಾರವಾಗಿ ನಮ್ಮೊಟ್ಟಿಗೆ ಚರ್ಚಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಜನಕ್ಕೆ ಅನ್ಯಾಯವಾಗಿದೆ. ಆದ ಕಾರಣ ಧ್ವನಿ ಎತ್ತಲಾಗುತ್ತಿದೆ. ಒಕ್ಕೂಟದಲ್ಲಿ ನೇಮಕಾತಿ, ಎಂವಿಕೆ ಡೇರಿ ನಿರ್ಮಾಣದ ಟೆಂಡರ್​ ಸೇರಿ ಇನ್ನು ಹಲವು ಟೆಂಡರ್​ಗಳಲ್ಲಿ ಅಕ್ರಮ ನಡೆದಿದೆ, ತನಿಖೆ ನಡೆಸಬೇಕು ಎಂದು ಸಹಕಾರ ಸಚಿವರಾದ ರಾಜಣ್ಣ, ಉಸ್ತುವಾರಿ ಸಚಿವ ಸುರೇಶ್​ ಅವರನ್ನು ಒತ್ತಾಯಿಸಿದ್ದರೂ ಸ್ಪಂದಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ವೈಯಕ್ತಿಕವಾಗಿ ಸಚಿವರ ಬಗ್ಗೆ ಅಪಾರ ಗೌರವವಿದೆ. ಆದರೆ, ಡೇರಿ ವಿಚಾರವಾಗಿ ಮೂಕ ಪ್ರೇಕ್ಷಕರಾಗಿದ್ದು ಏಕೆ? ಎಂಬುದು ಗೊತ್ತಾಗುತ್ತಿಲ್ಲ. ಇಷ್ಟೊಂದು ಅನ್ಯಾಯವಾದರೂ ಅವರಿಗೆ ಬೇಕಾಗಿರುವವರಿಗೆ ಅನುಕೂಲ ಮಾಡಿಕೊಡಲು ಸಭೆ ಕರೆದಿದ್ದು, ಸಭೆಗೆ ನಾನು ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಏ.14ರ ನಂತರ ಸಿಎಂ ಅವರನ್ನು ಭೇಟಿ ಮಾಡಿ ಕೋಮುಲ್​ನಲ್ಲಿ ಹಗರಣಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಒಂದು ವೇಳೆ ಅವರು ಸಹಕಾರ ನೀಡದಿದ್ದರೆ ಮಹಿಳೆಯರ, ರೈತರ ರಕ್ಷಣೆಗಾಗಿ ಪ್ರಗತಿ ಪರ ಚಿಂತಕರು ಸೇರಿ ಪಾತೀತ, ಜಾತ್ಯತಿತವಾಗಿ ನ್ಯಾಯಕ್ಕಾಗಿ ಒಕ್ಕೂಟದ ಮುಂದೆ ಧರಣಿ ಹಮ್ಮಿಕೊಳ್ಳಲು ಚರ್ಚಿಸಿದ್ದು, ಸಿಎಂ ಗಮನಕ್ಕೆ ತಂದು ಆಯೋಜನೆ ಮಾಡಲಾಗುವುದು ಎಂದರು.

ತಾಲೂಕುವಾರು ಮತ ಕ್ಷೇತ್ರವಿಂಡಗಣೆ, ವಿಧಾನಸಭೆ ಕ್ಷೇತ್ರವಾರಲ್ಲ

ಕೋಲಾರ: ಕೋಚಿಮುಲ್​ ವಿಭಜನೆ ನಂತರ ಒಕ್ಕೂಟದ ನಿರ್ದೇಶಕರ ಸಂಖ್ಯೆ ಹೆಚ್ಚಿಸಿ, ಮತ ಕ್ಷೇತ್ರ ವಿಂಗಡಣೆ ತಾಲೂಕುವಾರು ಮಾಡಲಾಗಿದೆ ಹೊರತು, ವಿಧಾನಸಭಾ ಕ್ಷೇತ್ರವಾರಲ್ಲ ಎಂದು ಶಾಸಕ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.

ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನಂಜೇಗೌಡ, ಖಾಸಗಿಯಾಗಿ ಚರ್ಚಿಸುವುದನ್ನು ಬಿಟ್ಟು ಬೈರತಿ ಸುರೇಶ್​ ಅವರಿಗೆ ಪತ್ರ ಬರೆದು ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಪಡಿಸಿರುವುದು ಬೇಜಾರಾಗಿದೆ ಎಂದರು.

ಕೆಜಿಎಫ್​ ಹಾಲು ಒಕ್ಕೂಟ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ 25 ಸಂಘಗಳನ್ನು ಅವರ ಅಭಿಪ್ರಾಯದಂತೆ ನೀಡಲಾಗಿರುತ್ತದೆಯೇ ವಿನ@, ಇದರಲ್ಲಿ ಬೇರೆ ಯಾವುದೇ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಅವರೇ ಪತ್ರದ ಮೂಲಕ ಬರೆದುಕೊಟ್ಟಂತೆಯೇ ಕ್ಷೇತ್ರ ವಿಂಗಡಣೆ ಮಾಡಿದ್ದರೂ ನಮ್ಮನ್ನು ಕಡೆಗಣಿಸಿದ್ದಾರೆಂದು ಹೇಳಿರುವುದು ಎಷ್ಟು ಸರಿ?, ಬಂಗಾರಪೇಟೆ ತಾಲೂಕು ಒಂದು ಕ್ಷೇತ್ರವನ್ನಾಗಿ ಮಾಡಿ ಎಂದು ನೀವೇ ನಿಮ್ಮ ಬರವಣಿಗೆಯ ರೂಪದಲ್ಲಿ ನೀಡಿದ್ದು, ಅದೇ ರೀತಿ ಕೆಜಿಎಫ್​ ಮತ ಕ್ಷೇತ್ರಕ್ಕೆ ಬಂಗಾರಪೇಟೆ ತಾಲೂಕಿನ ಹುನ್ಕುಂದ, ದೊಡ್ಡೂರು ಕರಪನಹಳ್ಳಿ, ದೊಡ್ಡವಲಗಮಾದಿ, ಕೇತಗಾನಹಳ್ಳಿ, ಕಾಮಸಮುದ್ರ, ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಎಂದು ಉಲ್ಲೇಖಿಸಿದ್ದೀರಿ. ಎಲ್ಲ ಪ್ರಕ್ರಿಯೆ ಮುಗಿದ ನಂತರ ಅಭಿಪ್ರಾಯವನ್ನು ಬದಲಾಯಿಸಿದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.

ಕೋಚಿಮುಲ್​ ಒಕ್ಕೂಟ ವಿಭಜನೆಯ ನಂತರ ನಿರ್ದೇಶಕರ ಸ್ಥಾನವನ್ನು ಹೆಚ್ಚಿಗೆ ಮಾಡಬೇಕಾದ ನಂತರ ಕ್ಷೇತ್ರ ಮರು ವಿಂಗಡಣೆ ಮಾಡಬೇಕಾಯಿತೇ ವಿನ@ ನನ್ನ ಇಚ್ಛೆಯಂತಲ್ಲ. ಆಡಳಿತ ಮಂಡಳಿಯ ಸಂಖ್ಯೆ 18 ಕ್ಕೆ ಏರಿಸಲಾಯಿತು ಎಂದು ತಿಳಿಸಿದರು.

* ಅಕ್ರಮವಾಗಿ ಸಂಪಾದಿಸಿಲ್ಲ

ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅವರೇ, ನನ್ನನ್ನು ಸಾಹುಕಾರ ಮತ್ತು ಪ್ರಭಾವಿ ಗಣಿಧಣಿ ಎಂದು ಬಿಂಬಿಸಿದ್ದೀರಿ. ಆದರೆ, ನನ್ನ ಇತಿಹಾಸ ಗೊತ್ತಿದೆ ಎಂದು ತಿಳಿದುಕೊಂಡಿದ್ದೇನೆ. ನನ್ನ ತಾತ ಮತ್ತು ತಂದೆ ಕಾಲದಿಂದಲೂ ಜಮೀನ್ದಾರರು. ರಿಯಲ್​ ಎಸ್ಟೇಟ್​ ಅಕ್ರಮ ಸಂಪಾದನೆಯಿಂದ ನಾವು ಮೇಲೆ ಬಂದಿಲ್ಲ ಎಂದು ನಂಜೇಗೌಡ ತಿರುಗೇಟು ನೀಡಿದರು.

* ನಿಮ್ಮ ಸರ್ಟಿಫಿಕೆಟ್​ ಬೇಕಿಲ್ಲ

ಸುಮಾರು 25 ವರ್ಷಗಳಿಂದ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್​ ಮಾಲೀಕನಾಗಿದ್ದೇನೆ. ಮತ್ತೊಂದು ಆರೋಪ ಹಾಲು ಒಕ್ಕೂಟದಲ್ಲಿ ಕಳೆದ 5 ವರ್ಷದಲ್ಲಿ 250 ಕೋಟಿ ರೂ. ಹಗರಣವಾಗಿದೆಯೆಂದು ಹೇಳಿರುತ್ತೀರಿ. ಈ ವಿಷಯವಾಗಿ ಯಾವುದೇ ತನಿಖೆಗೆ ಸಿದ್ಧ. ಯಾವುದೇ ಬ್ಲಾಕ್​ ಮೇಲ್​ಗೆ ಭಯ ಪಡುವುದಿಲ್ಲ. ನಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿಗೆ ಎರಡೂ ಜಿಲ್ಲೆಯ ಜನಪ್ರತಿನಿಧಿಗಳು, ನಿರ್ದೇಶಕರು ಸಹಕಾರ ನೀಡಿದ್ದಾರೆ. ಇದಕ್ಕೆ ರಾಜಕೀಯ, ಅಭಿವೃದ್ಧಿಗೆ ತಮ್ಮಿಂದ ನನಗೆ ಯಾವುದೇ ಸರ್ಟಿಫಿಕೇಟ್​ ಅವಶ್ಯಕತೆಯಿಲ್ಲ ಎಂದು ನಂಜೇಗೌಡ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net