

ಹೈದರಾಬಾದ್: ಅಮ್ಮ ತನ್ನ ಮೊಬೈಲ್ನಲ್ಲಿ ವಾಟ್ಸ್ಆ್ಯಪ್ ಸ್ಟೇಟಸ್ ಅಪ್ಡೇಟ್ ಮಾಡುತ್ತಿದ್ದಂತೆ ಮಗ ಅರೆಸ್ಟ್ ಆದ ಒಂದು ವಿಭಿನ್ನ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಅಷ್ಟಕ್ಕೂ ಆಗಿದ್ದೇನು ಎಂದು ತಿಳಿಯಲು ಈ ಸ್ಟೋರಿ ಓದಿ...
ಹೈದರಾಬಾದ್ನ ಸಾಯ್ಪುರಿ ಕಾಲನಿಯ ಅಂಗಿಡಿ ರವಿಕಿರಣ್ ಎಂಬುವರ ಮನೆಯಲ್ಲಿ ಕಳೆದ ವರ್ಷ ಜುಲೈನಲ್ಲಿ ಚಿನ್ನದ ಆಭರಣಗಳು ಕಳವಾಗಿದ್ದವು. ಜು.12ರಂದು ರವಿಕಿರಣ್ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ತೆಗೆದುಕೊಂಡಿತ್ತು. ಅವರಿಗೆ ಆಶ್ಚರ್ಯವಾದರೂ ತಾವೇ ಮರೆತು ಹಾಗೇ ಹೋಗಿದ್ದೇವೆನೋ ಎಂದುಕೊಂಡಿದ್ದರು. ಆದರೆ ನಂತರ ತಮ್ಮ ಮನೆಯಲ್ಲಿ ಆಭರಣ ಕಳವಾಗಿದ್ದು ಅವರ ಗಮನಕ್ಕೆ ಬಂದಿತ್ತು. ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು.
ಇಷ್ಟು ದಿನವಾದರೂ ಆರೋಪಿಗಳು ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ರವಿಕಿರಣ್ ತಮ್ಮ ಪಕ್ಕದ ಮನೆಯ ಮಹಿಳೆ ವಾಟ್ಸ್ಆ್ಯಪ್ ಸ್ಟೇಟಸ್ನ್ನು ನೋಡಿದರು. ಅದರಲ್ಲಿ ಮಹಿಳೆ ಧರಿಸಿದ್ದ ಚಿನ್ನಾಭರಣಗಳು ತಮ್ಮ ಮನೆಯಲ್ಲಿ ಕಳವಾದವುಗಳೇ ಎಂಬುದು ಗೊತ್ತಾಗುತ್ತಿದ್ದಂತೆ ರವಿ ಕಿರಣ್ ಪೊಲೀಸರಿಗೆ ತಿಳಿಸಿದರು. ವಿಚಾರಣೆಯ ವೇಳೆ ಗೊತ್ತಾದ ಸತ್ಯವೆಂದರೆ, ಈ ಮಹಿಳೆಯ ಮಗನೇ ಕಳೆದ ವರ್ಷ ರವಿ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದ. ಪೊನ್ನುಗೋಟಿ ಜಿತೇಂದರ್ ಆರೋಪಿ. ಸದ್ಯ ಆತನನ್ನು ಬಂಧಿಸಲಾಗಿದೆ. ಕಳವು ಮಾಡಿದ ಬಗ್ಗೆ ಗೊತ್ತಿದ್ದರೂ ಸುಮ್ಮನಿದ್ದ ತಾಯಿಗೆ ಕೂಡ ನೋಟಿಸ್ ನೀಡಿದ್ದಾರೆ. (ಏಜೆನ್ಸೀಸ್)