ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್​ ಪರಿಚಯಿಸಿದ Whatsapp​; ಈಗಲಾದರೂ ಬೀಳುತ್ತಾ ಸೈಬರ್​ ವಂಚನೆಗೆ ಕಡಿವಾಣ!?

WhatsApp
Published on

ನವದೆಹಲಿ: ಇತ್ತೀಚಿನ ವರ್ಷದಲ್ಲಿ ದೇಶದಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಿದ್ದು, ಎಷ್ಟೇ ಜಾಗೃತಿ ಮೂಡಿಸಿದರು ಜನ ಒಂದಿಲ್ಲೊಂದು ಕಾರಣಕ್ಕೆ ಸೈಬರ್ ವಂಚಕರ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಸೈಬರ್ ವಂಚಕರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಸಿದ್ಧ ಸಾಮಾಜಿಕ ಜಾಲತಾಣ ಮಾಧ್ಯಮವಾದ ವಾಟ್ಸ್​ಆ್ಯಪ್ (Whatsapp) ಹೊಸ ಫೀಚರ್​ ಒಂದನ್ನು ಪರಿಚಯಿಸಿದ್ದು, ಜನರಿಗೆ ಮತ್ತಷ್ಟು ಹತ್ತಿರವಾಗಿದೆ.

ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸಾಪ್ (Whatsapp) ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಸೆಲ್ಫಿ ಕ್ಯಾಮೆರಾ ಆನ್ ಮಾಡದೆಯೇ ವಿಡಿಯೋ ಕರೆಗಳಿಗೆ ಉತ್ತರಿಸುವ ಫೀಚರ್​ ಪರಿಚಯಿಸಲು ಮುಂದಾಗಿದೆ. ಈ ಅಪ್ಡೇಟ್​ ಹೆಚ್ಚುತ್ತಿರುವ ಸೈಬರ್ ವಂಚನೆ ಹಾಗೂ ಇನ್ನಿತರೆ ಪ್ರಕರಣಗಳಿಗೆ ಸಂಬಂಧಿಸಿದ್ದು, ಈ ಮೂಲಕ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. 

ಪ್ರಸ್ತುತ, ವಾಟ್ಸಾಪ್​ನಲ್ಲಿ (Whatsapp) ಅಪರಿಚಿತ ಸಂಖ್ಯೆಗಳಿಂದ ವೀಡಿಯೊ ಕರೆಯನ್ನು ಸ್ವೀಕರಿಸಿದಾಗ ಫೋನಿನ ಮುಂಬದಿಯ ಕ್ಯಾಮರಾ ತಕ್ಷಣವೇ ಆನ್ ಆಗುತ್ತದೆ. ಹೀಗಾಗಿ ವಾಟ್ಸಾಪ್ ಬಳಕೆದಾರರ ಗೌಪ್ಯತೆಯನ್ನು ಮತ್ತಷ್ಟು ಭದ್ರಪಡಿಸಲು ಮುಂದಾಗಿದ್ದು, ತನ್ನ ಬೀಟಾ ಆವೃತ್ತಿ 2.25.7.3 ರಲ್ಲಿ ಆಂಡ್ರಾಯ್ಡ್‌ಗಾಗಿ ಹೊಸ ಫೀಚರ್ ಒಂದನ್ನು ಪರಿಚಯಿಸುತ್ತಿದೆ. ಬಳಕೆದಾರರು ವಿಡಿಯೋ ಕರೆಗಳನ್ನು ಉತ್ತರಿಸುವುದಕ್ಕೂ ಮುನ್ನ ಕ್ಯಾಮರಾ ಆನ್-ಆಫ್​ ಮಾಡುವುದಕ್ಕೆ ಆ್ಯಪ್ ನಿಮ್ಮ ಬಳಿ ಅನುಮತಿ ಕೇಳಲಿದೆ. ಪ್ರಸ್ತುತ, ಈ ವೈಶಿಷ್ಟ್ಯವು ಸಾರ್ವಜನಿಕವಾಗಿ ಲಭ್ಯವಿಲ್ಲ ಮತ್ತು ಬೀಟಾ ಆವೃತ್ತಿಯಲ್ಲಿನ ಬಳಕೆದಾರರು ಇದನ್ನು ಬಳಸಬಹುದಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net