ಅಮಿತ್ ಷಾ ಹೇಳಿದ್ದರಲ್ಲಿ ತಪ್ಪೇನಿದೆ ಮಿಸ್ಟರ್ ಸುಳ್ಳುಗಾರ‌ ಸಿದ್ದರಾಮಯ್ಯ ?; ಆರ್.ಅಶೋಕ್ ಪ್ರಶ್ನೆ

R Ashok
Published on

ಬೆಂಗಳೂರು: ಬರಗಾಲ ಪರಿಹಾರ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದು ವಿಳಂಬವಾಗಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಸಿದ್ದರಾಮಯ್ಯ ದೊಡ್ಡ ಧ್ವನಿಯಲ್ಲಿ ಹೇಳಿದ್ದಾರೆ. ಅದಕ್ಕೂ ಮುನ್ನ ವಾಸ್ತವ ಪರಿಸ್ಥಿತಿ ಕಣ್ತೆರೆದು ನೋಡಲಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಸುಳ್ಳುಗಾರ ಸಿದ್ದರಾಮಯ್ಯ ಹೇಳಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೆಣಕುವ ರೀತಿಯಲ್ಲಿ ಪ್ರಶ್ನಿಸಿದರು.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು‌ ಹಂಗಾಮಿನಲ್ಲಿ ಜುಲೈನಲ್ಲಿಯೇ ವಾಡಿಕೆಗಿಂತ ಶೇಕಡ‌ 60ರಷ್ಟು ಮಳೆ ಕೊರತೆ ಉಂಟಾಗಿತ್ತು. ಜಲಾಶಯಗಳು ಬರಿದಾಗಿದ್ದನ್ನು ಅಧಿಕೃತ ದಾಖಲೆಗಳು ಹೇಳುತ್ತವೆ. ಮಳೆ ಕೊರತೆಯಿಂದ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ತುತ್ತಾಗಿದ್ದು, ಬರಗಾಲದ ಛಾಯೆ ಬಗ್ಗೆ ಪುರಾವೆ ಸಹಿತ ವಿಸ್ತೃತ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರ/ ಪ್ರಕಟವಾಗಿವೆ.

ಆವಾಗಿನ ಪರಿಸ್ಥಿತಿ ಗಂಭೀರತೆಗೆ ಸ್ಪಂದಿಸದೆ ಕಣ್ಣು ಕುರುಡಾದ ರೀತಿಯಲ್ಲಿ ಸಿದ್ದರಾಮಯ್ಯ ಸರ್ಕಾರ‌ ವರ್ತಿಸಿತು. ಸೆಪ್ಟೆಂಬರ್ ಬರಪೀಡಿತ ತಾಲೂಕುಗಳು ಎಂದು ಘೋಷಿಸಿತು. ಅಂದರೆ ರಾಜ್ಯಕ್ಕೆ ಬರ ವಕ್ಕರಿಸಿ ರೈತರು ತತ್ತರಿಸಿದ ನಂತರ ಮೂರು ತಿಂಗಳು ತಡವಾಗಿ ಬರಗಾಲ ಘೋಷಿಸಿತು. ಮೊನ್ನೆ ಬೆಂಗಳೂರಿಗೆ ಬಂದಿದ್ದ ಅಮಿತ್ ಷಾ ಇದನ್ನೇ ಹೇಳಿದ್ದಾರೆ ಎಂದು ಆರ್.ಅಶೋಕ್ ಸಮರ್ಥಿಸಿಕೊಂಡರು.

ಕರುಣೆಯೇ ಇಲ್ಲ

ಬೆಳೆ ನಷ್ಟ, ಸಾಲದ ಬಾಧೆ ತಾಳಲಾರದೆ 10 ತಿಂಗಳಲ್ಲಿ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಸ್ವಲ್ಪವೂ ಕರುಣೆ ಇಲ್ಲವಾಗಿದೆ. ಮೊದಲ ಕಂತಿನ ಪರಿಹಾರವಾಗಿ ತಲಾ ಎರಡು ಸಾವಿರ ಕೋಟಿ ರೂ.ನಂತೆ ಒಟ್ಟು 638 ಕೋಟಿ ರೂ. ಎಸ್ ಡಿಆರ್ ಎಫ್ ನಡಿ ಪಾವತಿಸಿದೆ.

ಇದರಲ್ಲೂ ಕೇಂದ್ರ ಸರ್ಕಾರದ ಶೇಕಡ 75ರಷ್ಟು ಪಾಲಿದೆ ಎನ್ನುವುದನ್ನು ಮರೆಯಬಾರದು. ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ವೃಥಾ‌ ಹುಯಿಲೆಬ್ಬಿಸಬಾರದು. ರಾಜ್ಯಕ್ಕೆ ಪ್ರವಾಹ, ಅತಿವೃಷ್ಟಿ ಬಂದಾಗ ಕೇಂದ್ರ ನೆರವಿಗೆ ಕಾಯದೆ ಬಿಜೆಪಿ ಸರ್ಕಾರ ತಿಂಗಳೊಳಗೆ ಪರಿಹಾರ ಮೊತ್ತ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿತ್ತು ಎಂದು ಮತ್ತೆ ನೆನಪಿಸಿದರು.

ಕಾಂಗ್ರೆಸ್ ವಿಳಂಬ ಮಾಡಿಲ್ಲವೆ ?

ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಐದು ತಿಂಗಳು ಕಳೆಯಿತು. ಎನ್ ಡಿಆರ್ ಎಫ್ ಬಿಡುಗಡೆ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರು ದೂರುತ್ತಿದ್ದಾರೆ. ಕರ್ನಾಟಕ ಒಂದೇ ಅಲ್ಲ, ದೇಶದ 12 ರಾಜ್ಯಗಳಲ್ಲಿ ಬರವಿದೆ. ಎಲ್ಲ ರಾಜ್ಯಗಳು ವರದಿ ಸಲ್ಲಿಸಿದ ನಂತರ ನಿಯಮಾನುಸಾರ ಕೇಂದ್ರ‌ ಗೃಹ ಸಚಿವರ ಉನ್ನತ ಸಮಿತಿ ಅನುದಾನ ಬಿಡುಗಡೆ ನಿರ್ಧಾರ ತೆಗೆದುಕೊಳ್ಳುತ್ತದೆ. ನೆರೆಯ ಮಹಾರಾಷ್ಟ್ರ ಸರ್ಕಾರ ಬರ ಘೋಷಿಸಿದ ಬೆನ್ನಲ್ಲೇ ರೈತರಿಗೆ ಪರಿಹಾರಧನ ಬಿಡುಗಡೆ ಮಾಡಿದೆ ಎಂದು ಆರ್.ಅಶೋಕ್ ಹೇಳಿದರು.

ರಾಜ್ಯದಲ್ಲೂ ಈ ಹಿಂದೆ ಕಾಂಗ್ರೆಸ್ ಸರ್ಕಾರ‌ ವಿಳಂಬ ಮಾಡಿಲ್ಲವೆ ? 2013ರಲ್ಲಿ ಬರ ಬಂತು, ಆಗಿನ ಸಿದ್ದರಾಮಯ್ಯ ಸರ್ಕಾರ ಒಂಭತ್ತು ತಿಂಗಳ ನಂತರ ಪರಿಹಾರ ನೀಡಿತು. 2018ರಲ್ಲೂ ಬರ ಬಂದಾಗ 11 ತಿಂಗಳು ತಡವಾಗಿ ಬರ ಪರಿಹಾರ ನೀಡಿದ ದಾಖಲೆಗಳಿವೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ತೆರಿಗೆ ಪಾಲು, ಅನುದಾನ ಹಂಚಿಕೆ ಕುರಿತು ಚರ್ಚೆ ಸಂಸತ್ತಿನಲ್ಲಿ ನಡೆಯಬೇಕೇ ಹೊರತು ಸಂತೆಯಲ್ಲಲ್ಲ. ಸಚಿವ ಕೃಷ್ಣಬೈರೇಗೌಡರು ಚುನಾವಣೆ ಕಾಲಕ್ಕೆ ಗಿಮಿಕ್ ಮಾಡಲು ಹೊರಟಿದ್ದಾರೆ. ಅಷ್ಟೊಂದು ಟ್ಯಾಲೆಂಟ್, ಸಾಮರ್ಥ್ಯವಿದ್ದರೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು, ಲೋಕಸಭೆಗೆ ಹೋಗಿ ಕೇಳಬಹುದಿತ್ತು ಎಂದು ಆರ್.ಅಶೋಕ್ ಕಾಲೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net